ದೇಶ

ಭಯೋತ್ಪಾದನೆ ಎದುರಿಸುವಲ್ಲಿ ದಿಟ್ಟ ಹೋರಾಟ: ಅಮೆರಿಕ ಪಾತ್ರ ಶ್ಲಾಘಿಸಿದ ಭಾರತ

Manjula VN

ನವದೆಹಲಿ: ಭಾರತ ಮತ್ತು ಅಮೆರಿಕ ಶುಕ್ರವಾರ ದ್ವಿಪಕ್ಷೀಯ ರಕ್ಷಣಾ ಸಂಬಂಧವನ್ನು ಇನ್ನಷ್ಟು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದ್ದು, ಭಯೋತ್ಪಾದನೆಯನ್ನು ಎದುರಿಸುವಲ್ಲಿ ಅಮೆರಿಕದ ಪಾತ್ರವನ್ನು ಭಾರತ ಶ್ಲಾಘಿಸಿದೆ.

ಯುಎಸ್ ಸೆನೆಟರ್ಗಳಾದ ಟೆಡ್ ಕ್ರೂಜ್ (ರಿಪಬ್ಲಿಕನ್ - ಟೆಕ್ಸಾಸ್) ಮತ್ತು ಮ್ಯಾಗಿ ಹಸನ್ (ಡೆಮೋಕ್ರಾಟ್ - ನ್ಯೂ ಹ್ಯಾಂಪ್ಶೈರ್) ರಾಷ್ಟ್ರ ರಾಜಧಾನಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದರು. ಸಭೆಯಲ್ಲಿ, ಎರಡೂ ರಾಷ್ಟ್ರಗಳ ನಡುವಿನ ಸಹಭಾಗಿತ್ವದಲ್ಲಿ ಆಗಿರುವ ಪ್ರಗತಿಯ ಬಗ್ಗೆ ಸಿಂಗ್ ತೃಪ್ತಿ ವ್ಯಕ್ತಪಡಿಸಿದರು.

ರಕ್ಷಣಾ ಸಚಿವರು ಅಮೆರಿಕವನ್ನು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಮತ್ತು ಭಾರತದ ಪ್ರಮುಖ ಮತ್ತು ವಿಶ್ವಾಸಾರ್ಹ ಪಾಲುದಾರರೆಂದು ಕರೆದರು.

ಕಳೆದ ಐದು ವರ್ಷಗಳಲ್ಲಿ ಭಾರತ-ಯುಎಸ್ ಸಹಕಾರವು ಅದ್ಭುತ ಬೆಳವಣಿಗೆಯನ್ನು ಕಂಡಿದೆ ಎಂದು ಹೇಳಿದ ಸಿಂಗ್, ಮುಂಬರುವ ವರ್ಷಗಳಲ್ಲಿ ಕಾರ್ಯತಂತ್ರದ ಸಹಭಾಗಿತ್ವವು ವಿಸ್ತರಿಸಲ್ಪಡುತ್ತದೆ ಮತ್ತು ಮತ್ತಷ್ಟು ಅಭಿವೃದ್ಧಿ ಹೊಂದುತ್ತದೆ ಎಂದು ಆಶಿಸಿದರು.

ಭಯೋತ್ಪಾದನೆಯನ್ನು ಎದುರಿಸುವಲ್ಲಿ ಯುಎಸ್ ವಹಿಸಿರುವ ಪಾತ್ರವನ್ನು ಅವರು ಶ್ಲಾಘಿಸಿದರು.

ಜಗತ್ತನ್ನು ಕಾಡುತ್ತಿರುವ ಭೀತಿಯನ್ನು ಎದುರಿಸುವಲ್ಲಿ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಕೆಲಸ ಮಾಡುವ ಭಾರತ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

ಭಾರತದಲ್ಲಿ ಅಮೆರಿಕ ರಾಯಭಾರಿ ಕೆನ್ನೆತ್ ಜಸ್ಟರ್ ಮತ್ತು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

SCROLL FOR NEXT