ದೇಶ

ರಾಜನಾಥ್ ಫ್ರಾನ್ಸ್ ಭೇಟಿ: 'ರಫೇಲ್ ಅಪರಾಧ  ಬಿಜೆಪಿ ನಾಯಕರನ್ನು ಕಾಡುತ್ತಿದೆ'- ರಾಹುಲ್ ಗಾಂಧಿ

Nagaraja AB

ಮುಂಬೈ: ರಫೇಲ್ ಯುದ್ಧ ವಿಮಾನ ಸ್ವೀಕಾರಕ್ಕಾಗಿ ಫ್ರಾನ್ಸ್ ಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಉದ್ದೇಶವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ವಿವಾದಾತ್ಮಾಕ ಒಪ್ಪಂದದಲ್ಲಿ ಅಪರಾಧ ಭಾವನೆ ಬಿಜೆಪಿ ನಾಯಕರನ್ನು ಕಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಚಂಡಿವಾಲಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಫೇಲ್ ಒಪ್ಪಂದ ಇನ್ನೂ ಬಿಜೆಪಿಯನ್ನು ಬಾಧಿಸುತ್ತಿದೆ. ಇಲ್ಲದಿದ್ದರೆ ರಾಜನಾಥ್ ಸಿಂಗ್ ಏಕೆ ಫ್ರಾನ್ಸ್ ಗೆ ಹೋಗಿ ಮೊದಲ ಯುದ್ಧ ವಿಮಾನವನ್ನು ಸ್ವೀಕರಿಸುತ್ತಿದ್ದರು ಎಂದು  ಪ್ರಶ್ನಿಸಿದರು.

ರಫೇಲ್ ಒಪ್ಪಂದದಲ್ಲಿ ತಪ್ಪು ಮಾಡಿರುವ ಅಪರಾಧ ಬಿಜೆಪಿ ನಾಯಕರನ್ನು ಕಾಡುತ್ತಿದೆ.  ರಫೇಲ್ ಒಪ್ಪಂದದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ಕೂಡಾ ಹೇಳಿಕೊಂಡಿದ್ದಾರೆ. ಈ ಸತ್ಯದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ನರೇಂದ್ರ ಮೋದಿ ಅಥವಾ ಅಮಿತ್ ಶಾ ಯಾರೇ ಆಗಲೀ ಸತ್ಯ ಒಂದಲ್ಲಾ ಒಂದು ದಿನ ಹೊರಗೆ ಬರಬೇಕಾಗುತ್ತದೆ ಎಂದರು. 

ರಫೇಲ್ ಒಪ್ಪಂದ ವಿವಾದಾತ್ಮಕ ಒಪ್ಪಂದ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಈ ಒಪ್ಪಂದದಲ್ಲಿ ಕಿಕ್ ಬ್ಯಾಕ್ ನೀಡಲಾಗಿದೆ.  ಬಿಜೆಪಿ ನಾಯಕರನ್ನುಈ ಒಪ್ಪಂದ ಈಗಲೂ ಕಾಡುತ್ತಿರುವುದರಿಂದಲೇ  ಈ ರೀತಿಯಲ್ಲಿ ಮೊದಲ ಯುದ್ಧ ವಿಮಾನವನ್ನು ಸ್ವೀಕರಿಸಲಾಗಿದೆ.  ಬ್ರಿಟಿಷರ ರೀತಿಯಲ್ಲಿ ದೇಶವನ್ನು ಒಡೆದು ಹಾಗೂ ಲೂಟಿ ಮಾಡುವ ಮೂಲಕ  ಬಿಜೆಪಿ ಆಳ್ವಿಕೆ ನಡೆಸುತ್ತಿದೆ ಎಂದು ಆರೋಪಿಸಿದರು.

ಮಹಾರಾಷ್ಟ್ರದಲ್ಲಿನ ಪಿಎಂಸಿ ಬ್ಯಾಕ್ ಹಗರಣದ ಬಗ್ಗೆಯೂ ಯಾವೊಬ್ಬ ಬಿಜೆಪಿ ನಾಯಕರು ಬಾಯಿ ಬಿಡುತ್ತಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದರು. 

SCROLL FOR NEXT