ದೇಶ

ತೆಲಂಗಾಣ ಸರ್ಕಾರ-ಸಾರಿಗೆ ನಿಗಮ ತಿಕ್ಕಾಟ ತಾರಕಕ್ಕೆ: ಆತ್ಮಹತ್ಯೆಗೆ ಯತ್ನಿಸಿದ್ದ ಚಾಲಕ ಸಾವು

Manjula VN

ಹೈದರಾಬಾದ್: ಸರ್ಕಾರ ಹಾಗೂ ತೆಲಂಗಾಣ ಸಾರಿಗೆ ನಿಗಮದ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಚಾಲಕ ಭಾನುವಾರ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. 

ನಿನ್ನೆಯಷ್ಟೇ ಖಮ್ಮಮ್ ಜಿಲ್ಲೆಯಲ್ಲಿ ಚಾಲಕರೊಬ್ಬರು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಚಾಲಕನ ದೇಹ ಶೇ.85ರಷ್ಟು ಸುಟ್ಟು ಹೋಗಿತ್ತು. ಆಸ್ಪತ್ರೆಗೆ ದಾಖಲಿಸಲಾಗಿದ್ದ ಚಾಲಕನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿತ್ತು. ರಾಮಚಂದ್ರಾಪುರಂ ಗ್ರಾಮದ ನಿವಾಸಿ ಶ್ರೀನಿವಾಸ ರೆಡ್ಡಿ ಯವರು ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ಹೇಳಲಾಗುತ್ತಿತ್ತು. 

ಇದೀಗ ಶ್ರೀನಿವಾಸ ರೆಡ್ಡಿಯವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ. ಶ್ರೀನಿವಾಸ ರೆಡ್ಡಿಯವರು ಖಮ್ಮಮ್ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 

ಮುಷ್ಕರ ನಿರತ ನೌಕರರ ಜೊತೆ ಯಾವುದೇ ಕಾರಣಕ್ಕೂ ಸಂಧಾನ ನಡೆಸುವುದಿಲ್ಲ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಹೇಳಿದ್ದರು. ಈ ಕುರಿತ ಸುದ್ದಿ ಕೇಳಿ ಆಘಾತಗೊಂಡ ಶ್ರೀನಿವಾಸ ರೆಡ್ಡಿಯವರು ಆತ್ಮಹತ್ಯೆಗೆ ಯತ್ನಿಸಿದ್ದರು. 

ಚಾಲಕ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಚಾಲಕ ಸಾವನ್ನಪ್ಪಿರುವ ಆಸ್ಪತ್ರೆ ಮುಂಭಾಗದಲ್ಲಿ ಸೇರಿರುವ ನೂರಾರು ಚಾಲಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ತೆಲಂಗಾಣ ಸಾರಿಗೆ ನಿಗಮದ 48,000ಕ್ಕೂ ಹೆಚ್ಚು ನೌಕರರು ಅ.5ರಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ, 

SCROLL FOR NEXT