ದೇಶ

ಡಿಕೆ ಶಿವಕುಮಾರ್ ತಾಯಿ, ಪತ್ನಿಗೂ ಇಡಿ ಸಮನ್ಸ್, ವಿಚಾರಣೆಗೆ ಹಾಜರಾಗುವಂತೆ ಸೂಚನೆ

Lingaraj Badiger

ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ತಿಹಾರ್ ಜೈಲು ಸೇರಿರುವ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ) ಸೋಮವಾರ ಸಮನ್ಸ್ ಜಾರಿ ಮಾಡಿದೆ.

ಅಕ್ರಮ ಹಣ ಹಾಗೂ ಆಸ್ತಿಗೆ ಸಂಬಂಧಿಸಿದಂತೆ ಸುಮಾರು 50 ಜನರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದೇವೆ. ಅದೇ ರೀತಿ ಶಿವಕುಮಾರ್ ಅವರ ತಾಯಿ ಹಾಗೂ ಪತ್ನಿಗೂ ಅಕ್ಟೋಬರ್ 17ರಂದು ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ ಎಂದು ಜಾರಿ ನಿರ್ದೇಶನಲಾಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮುಂಚೆ ಡಿಕೆ ಶಿವಕುಮಾರ್ ಅವರ ಸಹೋದರ ಸಂಸದ ಡಿಕೆ ಸುರೇಶ್ ಹಾಗೂ ಪುತ್ರಿ ಐಶ್ವರ್ಯ ಮತ್ತು ಡಿಕೆಶಿ ಆಪ್ತೆ, ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದ ಇಡಿ, ಈಗ ತಾಯಿ ಹಾಗೂ ಪತ್ನಿಯ ವಿಚಾರಣೆಗೆ ಮುಂದಾಗಿದೆ.

ಡಿಕೆಶಿ ತಾಯಿ ಗೌರಮ್ಮ ಅವರ ಖಾತೆಯಿಂದ ಕೋಟ್ಯಂತರ ರೂ. ಹಣ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಇಡಿ ಅವರಿಗೆ ಸಮನ್ಸ್ ಜಾರಿ ಮಾಡಿದೆ ಎನ್ನಲಾಗಿದೆ.

ಈ ಮಧ್ಯೆ ನ್ಯಾಯಾಂಗ ಬಂಧನದಲ್ಲಿರುವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಾಳೆಗೆ ಮುಂದೂಡಿದ್ದು, ಈಗ ತಾಯಿ ಮತ್ತು ಪತ್ನಿಗೆ ಇಡಿ ಕಂಟಕ ಎದುರಾಗಿದೆ.

SCROLL FOR NEXT