ದೇಶ

ಮಧ್ಯಪ್ರದೇಶಕ್ಕೆ ಅಸ್ಸಾಂ ಎನ್ಆರ್ ಸಿ ಸಂಯೋಜಕ ಪ್ರತೀಕ್ ಹಜೇಲಾ ವರ್ಗಾವಣೆ!

Srinivasamurthy VN

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಅಸ್ಸಾಂ ಎನ್ ಆರ್ ಸಿ ಸಂಯೋಕರಾಗಿದ್ದ ಪ್ರತೀಕ್ ಹಜೆಲಾರನ್ನು ಸುಪ್ರೀಂಕೋರ್ಟ್ ಮಧ್ಯಪ್ರದೇಶಕ್ಕೆ ವರ್ಗಾವಣೆ ಮಾಡಿದೆ.

ಹೌದು.. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಪ್ರತೀಕ್ ಹಜೆಲಾರನ್ನು ಮಧ್ಯಪ್ರದೇಶಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಈ ಕುರಿತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದು, ಅನುಮೋದನೆಗೆ ಏಳುದಿನಗಳ ಕಾಲಾವಕಾಶ ಕೂಡ ನೀಡಿದ್ದಾರೆ. 

ಇನ್ನು ಅಸ್ಸಾಂ ಎನ್ ಆರ್ ಸಿ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು ಪಟ್ಟಿಯಿಂದ ಮೂಲ ಭಾರತೀಯರನ್ನು ಕೂಡ ಕೈ ಬಿಡಲಾಗಿದೆ ಎಂಬ ಗಂಭೀರ ಆರೋಪ ಮಾಡಲಾಗಿತ್ತು. ಅಲ್ಲದೆ ದಶಕಗಳ ಕಾಲ ಭಾರತೀಯ ಸೇನೆ, ಸರ್ಕಾರ ಮತ್ತು ಇತರೆ ಪ್ರಮುಖ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದವರನ್ನೇ ಎನ್ ಆರ್ ಸಿ ಪಟ್ಟಿಯಿಂದ ಕೈ ಬಿಟ್ಟಿರುವುದು ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಪ್ರತೀಕ್ ಹಜೆಲಾರನ್ನು ವರ್ಗಾವಣೆ ಮಾಡುವಂತೆ ತೀವ್ರ ಒತ್ತಡ ಕೂಡ ಇತ್ತು ಎನ್ನಲಾಗಿದೆ. ಅಲ್ಲದೆ ಪ್ರತೀಕ್ ಹಜೆಲಾರ ವಿರುದ್ಧ ಪೊಲೀಸರು 2 ಎಫ್ ಐಆರ್ ಗಳನ್ನು ಕೂಡ ದಾಖಲಿಸಿಕೊಂಡಿದ್ದರು.

ಅಸ್ಸಾಂ ಎನ್ ಆರ್ ಸಿ ಅಂತಿಮ ಪಟ್ಟಿಯಿಂದ ಸುಮಾರು 19 ಲಕ್ಷ ಮಂದಿಯ ಹೆಸರುಗಳನ್ನು ಕೈ ಬಿಡಲಾಗಿತ್ತು. ಇದೇ ಪ್ರಕರಣದ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನವೆಂಬರ್ 26ರಂದು ನಡೆಸಲಿದೆ.

ಇನ್ನು ಇದೇ ವಿಚಾರವಾಗಿ ಮಾಹಿತಿ ನೀಡಿರುವ ಅಟಾರ್ನಿ ಜನರಲ್ ವೇಣುಗೋಪಾಲ್ ರಾವ್ ಅವರು ಸಿಜೆಐ ನಿರ್ಧಾರದ ಹಿಂದೆ ಬಲವಾದ ಕಾರಣ ಇರಬೇಕು. ಅವರು ಕಾರಣವಿಲ್ಲದೆ ವರ್ಗಾವಣೆ ಮಾಡುವಂತಿಲ್ಲ ಎಂದು ಹೇಳಿದ್ದಾರೆ.

SCROLL FOR NEXT