ದೇಶ

'ಕಪ್ಪು ಪಟ್ಟಿ' ಸೇರ್ಪಡೆ ವಿಚಾರದಲ್ಲಿ ಪಾಕಿಸ್ತಾನ ತೀವ್ರ ಒತ್ತಡ ಎದುರಿಸುತ್ತಿದೆ: ಜನರಲ್ ಬಿಪಿನ್ ರಾವತ್ 

Sumana Upadhyaya

ನವದೆಹಲಿ: ಬೂದು ಪಟ್ಟಿಯಲ್ಲಿರುವುದು( ಗ್ರೇ ಲಿಸ್ಟ್) ಯಾವುದೇ ದೇಶಕ್ಕೆ ಹಿನ್ನಡೆಯಾಗಿದ್ದು, ಹಣಕಾಸು ಕಾರ್ಯಪಡೆಯ(ಎಫ್ಎಟಿಎಫ್) ಆದೇಶಗಳನ್ನು ಪಾಲಿಸಲು ಪಾಕಿಸ್ತಾನದ ಮೇಲೆ ತೀವ್ರ ಒತ್ತಡವಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪ್ರತಿಪಾದಿಸಿದ್ದಾರೆ.


ಎಎನ್ಐ ಸುದ್ದಿಸಂಸ್ಥೆಯೊಂದಿಗೆ ದೆಹಲಿಯಲ್ಲಿಂದು ಮಾತನಾಡಿದ ಅವರು, ಪಾಕಿಸ್ತಾನದ ಮೇಲೆ ಎಫ್ಎಟಿಎಫ್ ಒತ್ತಡ ಹಾಕಿದೆ, ಇನ್ನಾದರೂ ಅವರು ಕಾರ್ಯೋನ್ಮುಖವಾಗಲೇಬೇಕು. ಅದರ ಮಾತನ್ನು ಪಾಕಿಸ್ತಾನ ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂಬುದು ಅದಕ್ಕೆ ಬಿಟ್ಟ ಸಂಗತಿ. ಎಫ್ಎಟಿಎಫ್ ನ ಆದೇಶದಂತೆ ನಡೆದುಕೊಂಡು ಶಾಂತಿ ಮರುಸ್ಥಾಪನೆಗೆ ಇನ್ನಾದರೂ ಪಾಕಿಸ್ತಾನ ಮುಂದಾಗಲಿ ಎಂದು ಭಾರತ ಬಯಸುತ್ತದೆ. ಬೂದು ಪಟ್ಟಿಯಲ್ಲಿ ಸೇರಿರುವುದು ಯಾವುದೇ ದೇಶಕ್ಕೆ ಕೂಡ ಹಿನ್ನಡೆ ಎಂದರು.


ಉಗ್ರಗಾಮಿಗಳಿಗೆ ಹಣಕಾಸು ನೆರವು ನೀಡುವ ಸಮಸ್ಯೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ವಿಚಾರದಲ್ಲಿ ಪಾಕಿಸ್ತಾನ ಯಾವುದೇ ಪ್ರಗತಿ ತೋರಿಸಿಲ್ಲ ಎಂದು ಎಫ್ಎಟಿಎಫ್ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿಕೆ ನೀಡಿದ್ದಾರೆ.


ಮುಂದಿನ ಫೆಬ್ರವರಿ ಹೊತ್ತಿಗೆ ಪಾಕಿಸ್ತಾನ ಸಾಕಷ್ಟು ಅಭಿವೃದ್ಧಿ ಹೊಂದದಿದ್ದರೆ ಅದನ್ನು ಕಪ್ಪು ಪಟ್ಟಿಯಲ್ಲಿರಿಸಲಾಗುತ್ತದೆ ಎಂದು ಎಫ್ಎಟಿಎಫ್ ಅಧ್ಯಕ್ಷ ಕ್ಸಿಯಾಂಗ್ ಮಿನ್ ಲಿಯು ಎಚ್ಚರಿಕೆ ನೀಡಿದ್ದಾರೆ. 

SCROLL FOR NEXT