ದೇಶ

ಉಗ್ರರು ಒಳನುಸುಳಲು ಮಾರ್ಗ ಹುಡುಕಿ; ಭಾರತದ ಏಜೆಂಟ್ ಗಳಿಗೆ ಐಎಸ್ಐ ಸೂಚನೆ

Srinivasamurthy VN

ನವದೆಹಲಿ: ಉಗ್ರರು ಭಾರತದೊಳಗೆ ಒಳನುಸುಳಲು ಹೊಸ ಮಾರ್ಗಗಳನ್ನು ಹುಡುಕುವಂತೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ತನ್ನ ಏಜೆಂಟ್ ಗಳಿಗೆ ಸೂಚನೆ ನೀಡಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದಕ ಸಂಘಟನೆಗಳ ಎಜೆಂಟ್ ಗಳಿಗೆ (ಒಜಿಡಬ್ಲ್ಯು) ಕಣಿವೆಯಲ್ಲಿ ತನ್ನ ನುಸುಳುಕೋರರಿಗೆ ಹೊಸ ಮಾರ್ಗ ಯೋಜನೆಯನ್ನು ರೂಪಿಸುವಂತೆ ನಿರ್ದೇಶನ ನೀಡಿದೆ. 

ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿರುವಂತೆ ಪ್ರತಿ ವರ್ಷ ಚಳಿಗಾಲದಲ್ಲಿ ಪಾಕಿಸ್ತಾನ ಮೂಲದ ಉಗ್ರರು ಭಾರತದ ಒಳನುಸುಳುವಿಕೆಯ ಕಾರ್ಯಾಚರಣೆಯನ್ನು ತೀವ್ರಗೊಳಿಸುತ್ತಾರೆ. ಈ ಸಂದರ್ಭದಲ್ಲಿ ಹಿಮ ಮಳೆಯಾಗುವುದರಿಂದ ಹಿಮದ ಹೊದಿಕೆಯಲ್ಲಿ ಭಾರತದ ಒಳಗಡೆ ನುಸುಳುತ್ತಾರೆ. ಇದೇ ಕಾರಣಕ್ಕೆ ಪಾಕ್​ ಗುಪ್ತಚರ ಸಂಸ್ಥೆ ಐಎಸ್​ಐ ಚಳಿಗಾಲಕ್ಕೂ ಮುನ್ನ ಹೊಸ ಮಾರ್ಗ ಯೋಜನೆಯನ್ನು ಸಿದ್ಧಪಡಿಸುವಂತೆ ಕಾಶ್ಮೀರದಲ್ಲಿರುವ ತನ್ನ ಭೂಗತ ಕಾರ್ಮಿಕರಿಗೆ ನಿರ್ದೇಶನ ನೀಡಿದೆ ಎಂದು ಹೇಳಲಾಗುತ್ತಿದೆ.

ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಮುಂಬರುವ ಚಳಿಗಾಲದ ಋತುವಿನಲ್ಲಿ ಹಿಮಪಾತದ ಸಮಯದಲ್ಲಿ ಒಳನುಸುಳಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಐಎಸ್‌ಐ ಮಾರ್ಗದರ್ಶಿಗಳಿಗೆ ಆದೇಶಿಸಿದೆ. ಗುರೆಜ್ ವಲಯದಲ್ಲಿ ಭಾರತೀಯ ಸೇನೆಯ ಪೋಸ್ಟ್ ಗಳನ್ನು ಪತ್ತೆ ಹಚ್ಚುವ ಕಾರ್ಯ ಮತ್ತು ಅದಕ್ಕೆ ಕಾರಣವಾಗುವ ಮಾರ್ಗಗಳ ಮಾಹಿತಿಯನ್ನು ಒಜಿಡಬ್ಲ್ಯುಗಳಿಗೆ ವಹಿಸಲಾಗಿದೆ ಎನ್ನಲಾಗಿದೆ. ಇದಕ್ಕಾಗಿ ನಕ್ಷೆಗಳನ್ನು ತಯಾರಿಸಲು ಸಹ ಅವರನ್ನು ಕೇಳಲಾಗಿದೆ ಎಂದು ತಿಳಿದುಬಂದಿದೆ.

ಅಲ್ಲದೆ ಹಿಮಪಾತದಿಂದಾಗಿ ಮಾರ್ಗಗಳನ್ನು ನಿರ್ಬಂಧಿಸಿದಾಗಲೂ ಭಯೋತ್ಪಾದಕರನ್ನು ಕಾಶ್ಮೀರ ಕಣಿವೆಯಲ್ಲಿ ಒಳನುಸುಳಿಸುವ ಪ್ರಯತ್ನ ನಡೆಯಲಿದೆ ಎಂದು ಗುಪ್ತಚರ ವರದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

SCROLL FOR NEXT