ದೇಶ

ಪಿಎಂಎಲ್‌ಎ ಪ್ರಕರಣ: ಡಿಕೆ ಶಿವಕುಮಾರ್ ಪತ್ನಿ, ತಾಯಿಗೆ ಹೊಸ ಸಮನ್ಸ್ ನೀಡಲು ಇಡಿ ತಯಾರಿ

Raghavendra Adiga

ನವದೆಹಲಿ: ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಕರ್ನಾಟಕ ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ್ ಅವರ ಪತ್ನಿ ಮತ್ತು ತಾಯಿಗೆಜಾರಿ ನಿರ್ದೇಶನಾಲಯ (ಇಡಿ) ಹೊಸದಾಗಿ ಸಮನ್ಸ್ ಜಾರಿ ಗೊಳಿಸಲಿದೆ. ಈ ಕುರಿತಂತೆ ಇಡಿ ಸೋಮವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಶಿವಕುಮಾರ್ ಅವರ ಪತ್ನಿ ಉಷಾ ಮತ್ತು ತಾಯಿ ಗೌರಮ್ಮ (85)  ಅವರುಗಳಿಗೆ ಈ ಹಿಂದೆ ನೀಡಿದ್ದ ಸಮನ್ಸ್ ಅಸ್ತಿತ್ವದಲ್ಲಿಲ್ಲ ಮತ್ತು ತನಿಖೆ ಪೂರ್ಣಗೊಳ್ಳಬೇಕಾಗಿರುವುದರಿಂದ ಹೊಸ ಸಮನ್ಸ್ ಜಾರಿಗೊಳಿಸುವುದಾಗಿ ನ್ಯಾಯಮೂರ್ತಿ ಬ್ರಿಜೇಶ್ ಸೇಥಿ ಅವರಿಗೆ ಇಡಿ ವಕೀಲರು ತಿಳಿಸಿದ್ದಾರೆ.

ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇಡಿ ನೀಡಿದ ಸಮನ್ಸ್ ಅನ್ನು ಪ್ರಶ್ನಿಸಿ ಉಷಾ ಹಾಗೂ ಗೌರಮ್ಮ ಪ್ರತ್ಯೇಕವಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು ಈ ಕುರಿತಂತೆ ನ್ಯಾಯಾಲಯ ವಿಚಾರಣೆ ನಡೆಸಿದೆ.ಗೌರಮ್ಮ ಮತ್ತು ಉಷಾ ಅವರನ್ನು ಕ್ರಮವಾಗಿ ಅಕ್ಟೋಬರ್ 15 ಮತ್ತು 17 ರಂದು ಹಾಜರಾಗುವಂತೆ ಇಡಿ ಕರೆ ನೀಡಿತ್ತು. ಗೌರಮ್ಮ ಆ ದಿನಾಂಕದಂದು ಹಾಜರಾಗಿರಲಿಲ್ಲ. 

ಇಂದು ಇಡಿ ಪರ ಹಾಜರಾದ ಕೇಂದ್ರ ಸರ್ಕಾರದ ಸ್ಥಾಯಿ ಸಲಹೆಗಾರ ಅಮಿತ್ ಮಹಾಜನ್, ತನಿಖೆಯನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಅದನ್ನು ಪೂರ್ಣಗೊಳಿಸಬೇಕಾಗಿದ್ದು, ಇದಕ್ಕಾಗಿ ಶೀಘ್ರದಲ್ಲೇ ಹೊಸ ಸಮನ್ಸ್ ಜಾರಿಗೊಳಿಸಲಾಗುವುದು ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ. ಇನ್ನು ಎರಡು ಅರ್ಜಿಗಳ ಬಗ್ಗೆ ವಾದಗಳನ್ನು ಆಲಿಸಲು ನ್ಯಾಯಾಲಯವು ಅಕ್ಟೋಬರ್ 24 ರಂದು ದಿನನಿಗದಿ ಮಾಡಿದೆ.

ಗೌರಮ್ಮ ಅವರನ್ನು ಪ್ರತಿನಿಧಿಸುವ ಹಿರಿಯ ವಕೀಲ ದಯನ್ ಕೃಷ್ಣನ್ ಇಡಿ ಸಮನ್ಸ್ ಜಾರಿಗೊಳಿಸುವಾಗ 15 ವರ್ಷಕ್ಕಿಂತ ಕಡಿಮೆ ವಯಸ್ಸಿನನವರು ಹಾಗೂ  65 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯನ್ನು ವಿಚಾರಣೆಗಾಗಿ ಕರೆ ನೀಡುವುದಿಲ್ಲ ಎಂಬ ನಿಯಮ ಪಾಲಿಸಬೇಕು. ಇದು ವ ಕ್ರಿಮಿನಲ್ ಪ್ರೊಸೀಜರ್ ಸಂಹಿತೆಯ ನಿಬಂಧನೆ ಎಂದು ಹೇಳಿದ್ದಾರೆ.

ಏಳು ಬಾರಿ ಶಾಸಕ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಸೆಪ್ಟೆಂಬರ್ 3 ರಂದು ಪಿಎಂಎಲ್‌ಎ ಪ್ರಕರಣದಡಿ ಇಡಿ ಬಂಧಿಸಿದೆ. ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿರುವ ಡಿಕೆಶಿಗೆ ದೆಹಲಿ ನ್ಯಾಯಾಲಯ ಜಾಮೀನು ನಿರಾಕರಿಸಿದ ಹಿನ್ನೆಲೆ ಅವರು ದೆಹಲಿ ಹೈಕೋರ್ಟ್ ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. 
 

SCROLL FOR NEXT