ದೇಶ

ಹರಿಯಾಣ, ಮಹಾರಾಷ್ಟ್ರ ವಿಧಾನಸಭೆ ಮತದಾನ ಆರಂಭ: ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ  

Nagaraja AB

ನವದೆಹಲಿ: ಹರಿಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭೆಗೆ ಮತದಾನ ಆರಂಭವಾಗಿದೆ. ಮಹಾರಾಷ್ಟ್ರದಲ್ಲಿ 3237 ಹಾಗೂ ಹರಿಯಾಣದಲ್ಲಿ 1169  ಅಭ್ಯರ್ಥಿಗಳ ಭವಿಷ್ಯ ಇಂದು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಭದ್ರವಾಗಲಿದೆ.

ಹರಿಯಾಣದಲ್ಲಿ 19 ಸಾವಿರದ 578 ಹಾಗೂ ಮಹಾರಾಷ್ಟ್ರದಲ್ಲಿ 96 ಸಾವಿರದ 661 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.

ಆರ್ ಎಸ್ ಎಸ್ ಸರಸಂಘ ಸಂಚಾಲಕ ಮೋಹನ್ ಭಾಗವತ್ ನಾಗ್ಪುರ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಿದರು.  ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಅವರ ಪತ್ನಿ ನಾಗ್ಪುರದಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಎನ್ ಸಿಪಿ ಮುಖಂಡರಾದ ಅಜಿತ್ ಪವಾರ್, ಫ್ರುಪುಲ್ ಪುಟೇಲ್ ಹಾಗೂ ಸುಪ್ರೀಯಾ ಸುಳೆ, ಹಿರಿಯ ನಟಿ ಶುಭಾ ಕೊಟೆ ಮತಚಲಾಯಿಸಿದರು. ಹರಿಯಾಣದಲ್ಲಿ  ಟಿಕ್ ಟಾಕ್ ಸ್ಟಾರ್ ಸೊನಾಲಿ ಪೊಗಾಟ್  ಮತದಾನ ಮಾಡಿದರು.

ಹರಿಯಾಣದ 90 ವಿಧಾನಸಭೆ ಹಾಗೂ ಮಹಾರಾಷ್ಟ್ರದ 288 ಸ್ಥಾನಗಳಿಗೆ  ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೂ ಮುಂದುವರೆಯಲಿದೆ. ಅಕ್ಟೋಬರ್ 24 ರಂದು ಮತಗಳ ಎಣಿಕೆ ನಡೆಯಲಿದೆ.

ಹರಿಯಾಣದಲ್ಲಿ 2, 987 ಮತಗಟ್ಟೆಗಳನ್ನು ಸೂಕ್ಷ್ಮ 151 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಕೇಂದ್ರ ಕಚೇರಿ ಚಂಡೀಗಡದಲ್ಲಿ ಸ್ಥಾಪಿಸಲಾಗಿರುವ ನಿಯಂತ್ರಣ ಕೊಠಡಿ ಮೂಲಕ ಮತದಾನದ  ನೇರ ದೃಶ್ಯಾವಳಿಗಳನ್ನು ವೀಕ್ಷಿಸಲಾಗುತ್ತಿದೆ. 

ಚುನಾವಣೆ ಹಿನ್ನೆಲೆಯಲ್ಲಿ  13 ಸಾವಿರ ಅರಸೇನಾ ಪಡೆ, 20 ಸಾವಿರಕ್ಕೂ ಹೆಚ್ಚು ಗೃಹ ರಕ್ಷಕ ದಳ ಹಾಗೂ ವಿಶೇಷ ಪೊಲೀಸ್ ಅಧಿಕಾರಿಗಳು ಸೇರಿದಂತೆ 40 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು  ಹರಿಯಾಣದಲ್ಲಿ ನಿಯೋಜಿಸಲಾಗಿದೆ. ಇಲ್ಲಿ ಬಿಜೆಪಿ, ಕಾಂಗ್ರೆಸ್, ಇಂಡಿಯನ್ ನ್ಯಾಷನಲ್ ಲೋಕ್ ದಳ ಮತ್ತು ಜೆಜೆಪಿ ನಡುವೆ ತೀವ್ರ ಪೈಪೋಟಿ ಇದೆ 

ಮಹಾರಾಷ್ಟ್ರದಲ್ಲಿ 40 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಭದ್ರತೆಗಾಗಿ ದ್ರೋಣ್ ಕಣ್ಗಾವಲು ಹಾಕಲಾಗಿದೆ.  288 ಸದಸ್ಯ ಬಲದ ಮಹಾರಾಷ್ಟ್ರದಲ್ಲಿ ಬಿಜೆಪಿ 150, ಶಿವಸೇನಾ 124 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಹಾಕಿದ್ದು , ಉಳಿದ ಕ್ಷೇತ್ರಗಳಲ್ಲಿ ಇತರ ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಡಲಾಗಿದೆ.  ಎನ್ ಸಿಪಿ ಜೊತೆಗಿನ ಮೈತ್ರಿಯೊಂದಿಗೆ ಕಾಂಗ್ರೆಸ್ ಚುನಾವಣೆ ಎದುರಿಸುತ್ತಿದೆ.

SCROLL FOR NEXT