ದೇಶ

ಗುಜರಾತ್ ನಲ್ಲಿ ಹಿಂದುತ್ವವಾದಿ ಕಮಲೇಶ್ ತಿವಾರಿ ಹಂತಕರ ಬಂಧನ

Lingaraj Badiger

ಅಹಮದಾಬಾದ್: ಹಿಂದೂ ಮಹಾಸಭಾ ಮಾಜಿ ನಾಯಕ ಕಮಲೇಶ್ ತಿವಾರಿ ಹತ್ಯೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿರುವುದಾಗಿ ಗುಜರಾತ್ ಉಗ್ರ ನಿಗ್ರಹ ದಳ ಮಂಗಳವಾರ ತಿಳಿಸಿದೆ.

ಗುಜರಾತ್ ಪೊಲೀಸರ ಪ್ರಕಾರ, ರಾಜಸ್ಥಾನದಿಂದ ರಾಜ್ಯ ಪ್ರವೇಶಿಸುತ್ತಿದ್ದ ಕಮಲೇಶ್ ತಿವಾರಿ ಹತ್ಯೆ ಆರೋಪಿಗಳಾದ ಅಶ್ಫಕ್ ಹುಸೈನ್ ಜಾಕೀರ್ ಹುಸ್ಸೇನ್ ಶೇಖ್ (34) ಮತ್ತು ಮೊಯಿನುದ್ದೀನ್ ಖುರ್ಷಿದ್ ಪಠಾಣ್(27)ರನ್ನು ಗುಜರಾತ್ - ರಾಜಸ್ಥಾನ ಗಡಿಪ್ರದೇಶದ ಶಾಮ್ಲಾಜಿ ಬಂಧಿಸಲಾಗಿದೆ.

ಜಾಕೀರ್ ಹುಸ್ಸೇನ್ ಶೇಖ್ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಹಾಗೂ ಪಠಾಣ್ ಫುಡ್ ಡೆಲಿವೆರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ, ಅಕ್ಟೋಬರ್ 18ರಂದು ಉತ್ತರಪ್ರದೇಶದ ಲಖನೌದಲ್ಲಿ ಕಮಲೇಶ್ ತಿವಾರಿ ಅವರನ್ನು ಹತ್ಯೆ ಮಾಡಿರುವುದಾಗಿ ಈ ಇಬ್ಬರು ಆರೋಪಿಗಳು ತಪ್ಪೊಪಿಕೊಂಡಿದ್ದಾರೆ ಎನ್ನಲಾಗಿದೆ.

ಕಮಲೇಶ್ ತಿವಾರಿ ಅವರು ಪ್ರವಾದಿ ಮಹಮ್ಮದ್ ಅವರ ಕುರಿತಾಗಿ ಕೀಳುಮಟ್ಟದ ಹೇಳಿಕೆ ನೀಡಿದ ಕಾರಣಕ್ಕೆ ಅವರನ್ನು ಹತ್ಯೆ ಮಾಡಿರುವುದಾಗಿ ಆರೋಪಿಗಳಿಬ್ಬರು ತಪ್ಪೊಪ್ಪಿಕೊಂಡಿರುವುದಾಗಿ ಪ್ರಾಥಮಿಕ ತನಿಖೆಗೆಯಿಂದ ತಿಳಿದುಬಂದಿದೆ.

ತಿವಾರಿ ಅವರನ್ನು ಹತ್ಯೆ ಮಾಡಿದ ಬಳಿಕ ಈ ಆರೋಪಿಗಳಿಬ್ಬರೂ ನೇಪಾಳಕ್ಕೆ ಪಲಾಯನ ಮಾಡಿದ್ದರು. ಆದರೆ ತಮ್ಮ ಕೈಯಲ್ಲಿದ್ದ ಹಣ ಖಾಲಿಯಾದ ಕಾರಣ ಅವರು ಮತ್ತೆ ಭಾರತಕ್ಕೆ ವಾಪಾಸು ಬಂದಿದ್ದರು. ಹಣಕ್ಕಾಗಿ ಅವರು ತಮ್ಮ ಗೆಳೆಯರು ಮತ್ತು ಸಂಬಂಧಿಕರಲ್ಲಿ ಕೆಲವರನ್ನು ಸಂಪರ್ಕಿಸುವ ಪ್ರಯತ್ನವನ್ನು ಮಾಡಿದ್ದರು. ಆದರೆ ಇವರೆಲ್ಲರ ಮೇಲೆ ಪೊಲೀಸರು ನಿಗಾ ಇರಿಸಿದ್ದರಿಂದ ಆರೋಪಿಗಳ ಜಾಡುಪತ್ತೆ ಸುಲಭವಾಯಿತು. ಇದೀಗ ಗುಜರಾತ್ ಎಟಿಎಸ್ ಪೊಲೀಸರು ಈ ಆರೋಪಿಗಳಿಬ್ಬರನ್ನು ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

SCROLL FOR NEXT