ಡಿಕೆ ಶಿವಕುಮಾರ್ 
ದೇಶ

ತಿಹಾರ್ ಜೈಲಿನಿಂದ ಡಿಕೆ ಶಿವಕುಮಾರ್ ಬಿಡುಗಡೆ, ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಎಂದ ಕಾಂಗ್ರೆಸ್ ನಾಯಕ

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರು ಬುಧವಾರ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರು ಬುಧವಾರ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

48 ದಿನಗಳ ಜೈಲು ವಾಸದ ನಂತರ ದೆಹಲಿ ಹೈಕೋರ್ಟ್ ಡಿಕೆ ಶಿವಕುಮಾರ್ ಅವರಿಗೆ ಇಂದು ಷರತ್ತುಬದ್ಧ ಜಾಮೀನ ನೀಡಿದ್ದು, ಜಾಮೀನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಾತ್ರಿ 9 ಗಂಟೆ ಸುಮಾರಿಗೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. 

ಜೈಲಿನಿಂದ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸಂಕಷ್ಟದ ಸಮಯದಲ್ಲಿ ನನ್ನ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ. ನಿಮ್ಮೆಲ್ಲರ ಶುಭ ಹಾರೈಕೆಯಿಂದ ನನಗೆ ಜಾಮೀನು ಸಿಕ್ಕಿದೆ. ನನ್ನ ಪರ ಹೋರಾಟ ನಡೆಸಿದ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹಾಗೂ ವಕೀಲರಿಗೆ ಕೃತಜ್ಞತೆಗಳು ಎಂದರು. ಅಲ್ಲದೆ ನಾಳೆ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದರು.

ಡಿಕೆಶಿ ಅವರನ್ನು ಸ್ವಾಗತಿಸಲು ಬೆಂಗಳೂರು ಗ್ರಾಮಾಂತರ ಸಂಸದ, ಸಹೋದರ ಡಿಕೆ ಸುರೇಶ್‌ ಹಾಗೂ ಹಲವಾರು ಬೆಂಬಲಿಗರು ಆಗಮಿಸಿದ್ದರು. ಮಾಜಿ ಸಚಿವ ಜೈಲಿನಿಂದ ಹೊರಬರುತ್ತಿದ್ದಂತೆ ಬೆಂಬಲಿಗರ ವಿಜಯೋತ್ಸವ ಮುಗಿಲುಮುಟ್ಟಿತು.

ದೆಹಲಿ ಹೈಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿ ಡಿಕೆಶಿ ಅವರಿಗೆ ಜಾಮೀನು ನೀಡಿದ್ದು, 25 ಲಕ್ಷ ರೂ ಠೇವಣಿ ಬಾಂಡ್ ನೀಡಬೇಕು, ಪಾಸ್‌ಪೋರ್ಟ್ ಕೋರ್ಟ್ ವಶಕ್ಕೆ ಸಲ್ಲಿಸಬೇಕು, ವಿದೇಶಕ್ಕೆ ತೆರಳುವಂತಿಲ್ಲ, ಸಾಕ್ಷ್ಯ ನಾಶಪಡಿಸುವಂತಿಲ್ಲ ಹಾಗೂ ವಿಚಾರಣೆಗೆ ಕರೆದಾಗ ಹಾಜರಾಗಬೇಕು ಎಂಬ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.

ಜಾಮೀನು ಸಿಕ್ಕ ಕಾರಣ ಡಿಕೆ ಶಿವಕುಮಾರ್ ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿಸಿ ಕೊಳ್ಳುವಂತಿಲ್ಲ. ಡಿಕೆಶಿವಕುಮಾರ್ ಗೆ ಅನಾರೋಗ್ಯವಿರುವ ಕಾರಣ ಜಾಮೀನು ಮಂಜೂರು ಮಾಡಿದ್ದು, ಪ್ರಚಾರ ಮಾಡಿದ್ದಲ್ಲಿ ಅಥವಾ ರಾಜಕೀಯಕ್ಕೆ ಸಂಬಂಧಿಸಿದಂತೆ ಭಾಷಣ ಮಾಡಿದ್ದಲ್ಲಿ ಇಡಿ ಮತ್ತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಡಿಕೆಶಿವಕುಮಾರ್ ಗೆ ನೀಡಿರುವ ಜಾಮೀನನ್ನು ರದ್ದುಪಡಿಸಬಹುದು ಎಂದು ಎಚ್ಚರಿಕೆ ನೀಡಿದೆ.

ಕಳೆದ 48 ದಿನಗಳಿಂದ ಜೈಲಿನಲ್ಲಿದ್ದ ಡಿಕೆಶಿವಕುಮಾರ್ ಗೆ ಬಿಗ್​ ರಿಲೀಫ್ ಸಿಕ್ಕಂತಾಗಿದೆ. ಕೋರ್ಟ್ ಆದೇಶದ ಪ್ರತಿ ಇಂದು ಸಂಜೆಯೊಳಗೆ ತಿಹಾರ್ ಜೈಲು ಅಧೀಕ್ಷರ ಕೈಗೆ ತಲುಪಿದ್ದು ತಡರಾತ್ರಿ 9.45ಕ್ಕೆ ಡಿಕೆ ಶಿವಕುಮಾರ್ ತಿಹಾಲ್ ಜೈಲಿನಿಂದ ಬಿಡುಗಡೆಯಾದರು.

ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ತೀರ್ಪು ನೀಡುವ ವೇಳೆ ಕೋರ್ಟ್​ ಹಾಲ್​ನಲ್ಲಿ ಅನೇಕ ಮಂದಿ ಸೇರಿದ್ದರು. ಸಂಸದ ಡಿ.ಕೆ.ಸುರೇಶ್​ ಕೋರ್ಟ್ ಹಾಲ್​ನಲ್ಲಿ ಇದ್ದರು.

2017ರಲ್ಲಿ ಡಿ.ಕೆ.ಶಿವಕುಮಾರ್ ಅವರ ದೆಹಲಿ ಮನೆಯಲ್ಲಿ ಐಟಿ ದಾಳಿಯಾದಾಗ ದಾಖಲೆಗಳಿಲ್ಲದ ಹಣ ಪತ್ತೆಯಾಗಿತ್ತು.ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಇ.ಡಿ.ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ವಿಚಾರಣೆಗೆಂದು ದೆಹಲಿಗೆ ಕರೆಸಿದ್ದರು. ಆದರೆ ವಿಚಾರಣೆಗೆ ಸರಿಯಾಗಿ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಅವರನ್ನು ಬಂಧಿಸಲಾಗಿತ್ತು.

ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಸೆಪ್ಟಂಬರ್ 19 ರಂದು ಆಸ್ಪತ್ರೆಗೆ ದಾಖಲಾಗಿದ್ದ ಡಿ.ಕೆ.ಶಿವಕುಮಾರ್ ಬಳಿಕ ತಿಹಾರ್​ ಜೈಲಿನಲ್ಲಿ ಇದ್ದರು. ಈ ಮಧ್ಯೆ ಜಾಮೀನು ಮಂಜೂರು ಮಾಡುವಂತೆ ದೆಹಲಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಡಿ.ಕೆ.ಶಿವಕುಮಾರ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಮುಕುಲ್​ ರೋಹಟಗಿ ಈ ಹಿಂದಿನ ಹಲವು ಅಕ್ರಮ ಹಣಕ್ಕೆ ಸಂಬಂಧಪಟ್ಟ ಪ್ರಕರಣಗಳನ್ನು ಉದಾಹರಣೆ ನೀಡಿ, ಇದು ಬಂಧಿಸುವಂತಹ ಕೇಸ್​ ಅಲ್ಲ. ಇ.ಡಿ.ಅಧಿಕಾರಿಗಳು ಎಡವಿದ್ದಾರೆ ಎಂದು ಹೇಳಿದ್ದರು.
ಅಲ್ಲದೆ ಡಿ.ಕೆ.ಶಿವಕುಮಾರ್​ ವಿಚಾರಣೆಗೆ ನುಣುಚಿಕೊಂಡಿಲ್ಲ.ಅವರ ಆರೋಗ್ಯವೂ ಸರಿಯಾಗಿಲ್ಲ. ಈ ಎಲ್ಲ ವಿಚಾರಗಳನ್ನೂ ಪರಿಗಣಿಸಿ ಅವರಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು.

ಅದಕ್ಕೆ ಪ್ರತಿಯಾಗಿ ವಾದ ಮಾಡಿದ್ದ ಇ.ಡಿ.ಪರ ವಕೀಲ ನಟರಾಜ್​, ಡಿ.ಕೆ.ಶಿವಕುಮಾರ್​ಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ಅವರ ಪ್ರಕರಣದಲ್ಲಿ ಅಕ್ರಮ ಸ್ಪಷ್ಟವಾಗಿ ಗೋಚರಿಸುತ್ತದೆ. ಅವರು ವಿಚಾರಣೆಗೆ ಸಹಕರಿಸಿಲ್ಲ. ಇನ್ನೂ ವಿಚಾರಣೆ ಬಾಕಿಯಿದೆ ಎಂದು ಹೇಳಿದ್ದರು. ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಧೀಶ ಸುರೇಶ್​ ಕುಮಾರ್​ ಕೈಟ್​ ತೀರ್ಪು ಕಾಯ್ದಿರಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT