ದೇಶ

ಟರ್ಕಿಗೆ ಭೇಟಿ ಕೊಡುವ ನಾಗರಿಕರು 'ಅತ್ಯಂತ ಎಚ್ಚರವಾಗಿರಿ': ಭಾರತ ಸರ್ಕಾರ ಸೂಚನೆ

Raghavendra Adiga

ನವದೆಹಲಿ: ಮಧ್ಯಪ್ರಾಚ್ಯ ರಾಷ್ಟ್ರ ಟರ್ಕಿಗೆ ಭೇಟಿಕೊಡುವ ತನ್ನ ನಾಗರಿಕರು "ಅತ್ಯಂತ ಎಚ್ಚರಿಕೆಯಿಂದ" ಇರಬೇಕೆಂದು ಭಾರತ ಸೂಚನೆ ನೀಡಿದೆ.

"ಆ ರಾಷ್ಟ್ರದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿರಿಸಿಕೊಂಡು  ಭಾರತ ಸರ್ಕಾರವು ಟರ್ಕಿಗೆ ಪ್ರಯಾಣಿಸುವ ಭಾರತೀಯರಿಗೆ ಈ ಸೂಚನೆ ನೀಡಿದೆ. ಅಲ್ಲದೆ ಅವರಿಂದ ಪ್ರಶ್ನೆಗಳನ್ನು ಸ್ವೀಕರಿಸುತ್ತಿದೆ.ಇಲ್ಲಿಯವರೆಗೆ ನಡೆದ ಅಹಿತಕರ ಘಟನೆಗಳಲ್ಲಿ ಯಾವುದೇ ಭಾರತೀಯ ಪ್ರಜೆಗಳು ಒಳಗೊಂಡಿಲ್ಲವಾದರೂ  ಪ್ರಯಾಣಿಕರು ಅತ್ಯಂತ ಎಚ್ಚರಿಕೆಯಿಂದ ವರ್ತಿಸುವಂತೆ ಕೋರಲಾಗಿದೆ " ಅಂಕಾರಾದಲ್ಲಿನ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

ಇನ್ನು ನೆರವು ಅಗತ್ಯವಿರುವವರಿಗೆ ಸಹಾಯವಾಗುವಂತೆ  ಭಾರತೀಯ ರಾಯಭಾರ ಕಚೇರಿ ಮತ್ತು ಇಸ್ತಾಂಬುಲ್‌ನ ದೂತಾವಾಸದ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ.

73ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧಿವೇಶನದಲ್ಲಿ ಟರ್ಕಿ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡೊಗನ್‌ ಭಾರತದ  370 ನೇ ವಿಧಿ ರದ್ದತಿ ಬಗೆಗೆ ಟೀಕೆ ವ್ಯಕ್ತಪಡಿಸಿದ ಬಳಿಕ ಭಾರತ ಮತ್ತು ಟರ್ಕಿ ನಡುವಿನ ಸಂಬಂಧಗಳು ಬಿಗಡಾಯಿಸಿದವು. ಕಾಶ್ಮೀರದ ಕುರಿತಂತೆ ಟರ್ಕಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಭಾರತ , ಈ ವಿಷಯದ ಬಗ್ಗೆ ಪ್ರತಿಕ್ರಿಯಿಸುವ ಮೊದಲು "ನಿಮ್ಮ ಸ್ಥಳೀಯ ಸಮಸ್ಯೆಗಳ ಬಗೆಗೆ " ಸರಿಯಾದ ತಿಳುವಳಿಕೆಯನ್ನು ಪಡೆಯಲು ಸೂಚಿಸಿದೆ. ಈಶಾನ್ಯ ಸಿರಿಯಾದಲ್ಲಿ ಟರ್ಕಿಯ ಏಕಪಕ್ಷೀಯ ಮಿಲಿಟರಿ ದಾಳಿಯ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದ್ದು ಇದರಿಂದ ಆ ಪ್ರದೇಶದ ಸ್ಥಿರತೆ ಹಾಳಾಗಲಿದೆ, ಅಷ್ಟೇ ಅಲ್ಲದೆ ಮಾನವೀಯ, ನಾಗರಿಕ ಸಂಬಂಧಗಳು ಹದಗೆಡಲಿದೆ ಎಂದು ಎಚ್ಚರಿಸಿದೆ.

ಮತ್ತೊಂದೆಡೆ, ಈ ತಿಂಗಳ ಆರಂಭದಲ್ಲಿ ಪ್ಯಾರಿಸ್‌ನಲ್ಲಿ ನಡೆದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಸಮಗ್ರ ಸಭೆಯಲ್ಲಿ ಟರ್ಕಿ ಕೂಡ ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸಿದೆ.

SCROLL FOR NEXT