ದೇಶ

ಡೆಂಗ್ಯೂ ನಿಯಂತ್ರಿಸದಿದ್ದರೆ 50 ಲಕ್ಷ ರೂ. ಪರಿಹಾರ ನೀಡಿ: ತೆಲಂಗಾಣ ಹೈಕೋರ್ಟ್

Lingaraj Badiger

ಹೈದರಾಬಾದ್: ರಾಜ್ಯ ಸರ್ಕಾರ ಡೆಂಗ್ಯೂ ನಿಯಂತ್ರಿಸಲು ವಿಫಲವಾದರೆ, ಡೆಂಗ್ಯೂ ಜ್ವರದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ತೆಲಂಗಾಣ ಹೈಕೋರ್ಟ್ ಗುರುವಾರ ಸೂಚಿಸಿದೆ.

ಡೆಂಗ್ಯೂ ಸೊಳ್ಳೆಗಳನ್ನು ನಿಯಂತ್ರಿಸಲು ವಿಫಲವಾದ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ನಿಮ್ಮ ನಿರ್ಲಕ್ಷ್ಯದಿಂದ ಡೆಂಗ್ಯೂ ಹಾಗೂ ಇತರೆ ಸೊಳ್ಳೆಗಳಿಂದ ಜನ ಸಾವನ್ನಪ್ಪುತ್ತಿದ್ದಾರೆ ಎಂದಿದೆ.

ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಆರ್ ಎಸ್ ಚೌಹ್ವಾಣ್ ಮತ್ತು ನ್ಯಾಯಮೂರ್ತಿ ಅಭಿಶೇಕ್ ರೆಡ್ಡಿ, ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್ ಕೆ ಜೋಶಿ, ಪೌರಾಡಳಿತ ಕಾರ್ಯದರ್ಶಿ ಅರವಿಂದ್ ಕುಮಾರ್ ಹಾಗೂ ಹೈದರಾಬಾದ್ ಮಹಾನಗರ ಪಾಲಿಕೆ ಆಯುಕ್ತ ಲೋಕೇಶ್ ಕುಮಾರ್ ಅವರಿಗೆ ಸಮನ್ಸ್ ನೀಡಿದ್ದಾರೆ.

ಡೆಂಗ್ಯೂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇವಲು ಪೇಪರ್ ನಲ್ಲಿ ಮಾತ್ರ ಕ್ರಮ ತೆಗೆದುಕೊಳ್ಳಲಾಗಿದೆ. ಹೈಕೋರ್ಟ್ ಮುಂದೆ ಇರುವ ಮುಸಿ ನದಿಗೆ ಹೋಗಿ ನೋಡಿ ನಿಮಗೆ ಗೊತ್ತಾಗುತ್ತೆ ಎಂದು ಅಧಿಕಾರಿಗಳಿಗೆ ಛೀ ಮಾರಿ ಹಾಕಿದೆ.

ಡೆಂಗ್ಯೂ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಂಡಿದ್ದರೆ ಕಳೆದ ಜನವರಿಯಲ್ಲಿ 85 ಇದ್ದ ಡೆಂಗ್ಯೂ ಪ್ರಕರಣ ಅಕ್ಟೋಬರ್ ನಲ್ಲಿ 3,800ಕ್ಕೆ ಏರಿಕೆಯಾಗಲು ಹೇಗೆ ಸಾಧ್ಯ? ಎಂದು ಕೋರ್ಟ್ ಪ್ರಶ್ನಿಸಿದೆ. ಅಲ್ಲದೆ ಡೆಂಗ್ಯೂ ನಿಯಂತ್ರಿಸದಿದ್ದರೆ ಜನರಿಗೆ ಪರಿಹಾರ ನೀಡಬೇಕು ಎಂದು ಎಚ್ಚರಿಸಿದೆ.

SCROLL FOR NEXT