ದೇಶ

ರಾಜ್ಯಸಭೆಯಲ್ಲಿ ಬಹುಮತ: ಬಿಜೆಪಿ ಕನಸಿಗೆ ಬಿತ್ತು ಬಹು ದೊಡ್ಡ ಹೊಡೆತ!

Shilpa D

ನವದೆಹಲಿ: ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ಆಗದ ಕಾರಣ ರಾಜ್ಯಸಭೆಯಲ್ಲಿ ಬಹುಮತ ಗಳಿಸುವ ಬಿಜೆಪಿಯ ಮಹತ್ವದ ಕನಸಿಗೆ ಬಹಳ ದೊಡ್ಡ ಹೊಡೆತ ಬಿದ್ದಿದೆ.

ಎರಡೂ ರಾಜ್ಯಗಳ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದರೆ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಯ ಆಘಾತಕಾರಿ ಸೋಲಿನಿಂದಾಗಿ ರಾಜ್ಯಸಭೆಯಲ್ಲಿ ಆಗಿದ್ದ ನಷ್ಟ ಸರಿಪಡಿಸಿಕೊಳ್ಳಲು ಒಳ್ಳೆಯ ಅವಕಾಶವಿತ್ತು. ಎರಡೂ  ರಾಜ್ಯಗಳ ಫಲಿತಾಂಶದ ಬಳಿಕ ರಾಜ್ಯಸಭೆಯಲ್ಲಿ ಬಿಜೆಪಿಗೆ ಎರಡೂ ಸ್ಥಾನಗಳು ನಷ್ಟವಾಗಲಿದ್ದು, ಇದು ಕಾಂಗ್ರೆಸ್ ತೆಕ್ಕೆಗೆ ಹೋಗಲಿದೆ.

ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಸಭೆಗೆ ಕ್ರಮವಾಗಿ 19 ಮತ್ತು 5 ಸದಸ್ಯರನ್ನು ಕಳುಹಿಸುತ್ತವೆ. ಹರಿಯಾಣ ಐದು ಸ್ಥಾನಗಳ ಪೈಕಿ ಕಾಂಗ್ರೆಸ್ ಕೇವಲ ಒಂದು ಸ್ಥಾನ ಹೊಂದಿದ್ದರೆ, ಬಿಜೆಪಿಯ ಮೂವರು ಸದಸ್ಯರಿದ್ದಾರೆ. ಸುಭಾಷ್‌ ಚಂದ್ರ ಪಕ್ಷೇತರರಾಗಿ ಹರಿಯಾಣದಿಂದ  ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಆದರೆ ಅವರು ಕೂಡಾ ಬಿಜೆಪಿ ಬೆಂಬಲಿತ ಅಭ್ಯರ್ಥಿ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಎನ್‌ಸಿಪಿ ಏಳು ಸಂಸದರನ್ನು ಹೊಂದಿದ್ದರೆ, ಎನ್‌ಡಿಎ 11 ಸದಸ್ಯರನ್ನು ಹೊಂದಿದೆ.

ಹರ್ಯಾಣದ ಐದು ರಾಜ್ಯಸಭಾ ಕ್ಷೇತ್ರಗಳ ಪೈಕಿ ತಲಾ ಎರಡು ಸ್ಥಾನಗಳಿಗೆ 2020 ಮತ್ತು 2022ರಲ್ಲಿ ಚುನಾವಣೆ ನಡೆಯುತ್ತದೆ. ಮಹಾರಾಷ್ಟ್ರದ 19 ಸ್ಥಾನಗಳ ಪೈಕಿ 7 ಸ್ಥಾನಗಳಿಗೆ 2020ರಲ್ಲಿ ಹಾಗೂ ಆರು ಸ್ಥಾನಗಳಿಗೆ 2022ರಲ್ಲಿ ಚುನಾವಣೆ ನಡೆಯಲಿದೆ. ಎರಡೂ ರಾಜ್ಯಗಳ ಉಳಿದ ಸ್ಥಾನಗಳಿಗೆ 2024ರಲ್ಲಿ ಚುನಾವಣೆ ನಡೆಯಬೇಕಿದೆ.

SCROLL FOR NEXT