ದೇಶ

ಹರ್ಯಾಣ ಸರ್ಕಾರ ರಚನೆ: ಹೆಚ್ಎಲ್‏ಪಿ ಶಾಸಕ, 7 ಪಕ್ಷೇತರರ ಬೆಂಬಲ; ಹಕ್ಕು ಮಂಡನೆಗೆ ಬಿಜೆಪಿ ಸಿದ್ಧತೆ

Nagaraja AB

ಚಂಡೀಘಡ:  ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸರ್ಕಾರ ರಚನೆಗೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದ ಹಿನ್ನೆಲೆಯಲ್ಲಿ ಏಳು ಪಕ್ಷೇತರ ಹಾಗೂ ಹರಿಯಾಣ ಲೋಕ ಹಿತ ಪಾರ್ಟಿಯ ಓರ್ವ ಶಾಸಕನ ಬೆಂಬಲದೊಂದಿಗೆ ಸರ್ಕಾರ ಹಕ್ಕು ಮಂಡನೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ. 

ನವದೆಹಲಿಯಲ್ಲಿಂದು  ಬಿಜೆಪಿ ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾ ಅವರನ್ನು ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಭೇಟಿ ಮಾಡಿದ್ದು ಸರ್ಕಾರ ರಚನೆ ಸಂಬಂಧ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆರು ಪಕ್ಷೇತರ ಶಾಸಕರು ಕೂಡಾ ಉಪಸ್ಥಿತರಿದ್ದರು ಎಂಬುದು ಮೂಲಗಳಿಂದ ತಿಳಿದುಬಂದಿದೆ. ಬಿಜೆಪಿ ಶೀಘ್ರದಲ್ಲಿ ಸರ್ಕಾರ ರಚನೆಯ ಹಕ್ಕು ಮಂಡಿಸಲಿದೆ ಎಂದು ಕಟ್ಟರ್ ತಿಳಿಸಿದ್ದಾರೆ.

ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ರಂಜಿತ್ ಸಿಂಗ್ ಹಾಗೂ ಹೆಚ್ ಎಲ್ ಪಿಯ  ಒಬ್ಬನೇ ಶಾಸಕ ಗೋಪಾಲ್ ಕಂಡಾ ಅವರನ್ನು  ಬಿಜೆಪಿ ಸಿರ್ಸಾ ಸಂಸದ ಸುನೀತಾ ದುಗ್ಗಲ್ ಗುರುವಾರ ರಾತ್ರಿಯೇ ದೆಹಲಿಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ. 

ಕಂಡಾ ಸಿರ್ಸಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರೆ,  ಹರಿಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಅವರ ಸಹೋದರ ರಂಜಿತ್ ಸಿಂಗ್ ರಾನಿಯಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದರಿಂದ ಪಕ್ಷೇತರರಾಗಿ ಇವರು ಚುನಾವಣೆಗೆ ಸ್ಪರ್ಧಿಸಿದ್ದರು.

ಹೂಡಾ ನೇತೃತ್ವದ ಸರ್ಕಾರದಲ್ಲಿ 2012ರಲ್ಲಿ ಕಾಂಡಾ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅವರ ಮಾಲೀಕತ್ವದ ಎಂಡಿಎಲ್ ಆರ್ ಏರ್ ಲೈನ್ಸ್  ಮಾಜಿ  ಗಗನಸಖಿಯೊಬ್ಬರು  ಆತ್ಮಹತ್ಯೆ ಮಾಡಿಕೊಂಡ  ನಂತರ ಕಿರುಕುಳ ಆರೋಪದ ಮೇರೆಗೆ ಅವರನ್ನು ಬಂಧಿಸಲಾಗಿತ್ತು. 2013ರ ಫೆಬ್ರವರಿಯಲ್ಲಿ ಅವರ ತಾಯಿ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದರು.

ಬಿಜೆಪಿಯನ್ನು ಬೆಂಬಲಿಸಲು ಎಲ್ಲಾ ಪಕ್ಷೇತರ ಶಾಸಕರು ನಿರ್ಧರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಹರ್ಯಾಣ ಅಭಿವೃದ್ಧಿಯಾಗಲಿದೆ ಎಂದು ಕಾಂಡಾ ಹೇಳಿದ್ದಾರೆ

ಮೇಘಂ ಕ್ಷೇತ್ರದ ಬಾಲರಾಜ್ ಕುಂದು, ಪೃಥ್ಲಾ ಕ್ಷೇತ್ರದ ನಯನ್ ಪಾಲ್ ರಾವತ್, ನಿಲೋಖೇರಿ ವಿಧಾನಸಭಾ ಕ್ಷೇತ್ರದ ಧರ್ಮಪಾಲ್ ಗೊಂಡರ್,  ಪುಂದ್ರಿಯ ರಣಧೀರ್ ಸಿಂಗ್ ಗೊಲ್ಲನ್, ದಾದ್ರಿಯ ಸೋಂಬೀರ್ ಸಾಂಗ್ವಾನ್ ಹಾಗೂ ಬಾದ್‌ಶಾಹಪುರ ವಿಧಾನಸಭಾ ಕ್ಷೇತ್ರದ ರಾಕೇಶ್ ದೌಲತಾಬಾದ್ ಇತರ ಆರು ಮಂದಿ ಪಕ್ಷೇತರ ಶಾಸಕರಾಗಿದ್ದಾರೆ. ಈ ಪೈಕಿ ನಾಲ್ವರು ಬಿಜೆಪಿಯ ಬಂಡಾಯ ಅಭ್ಯರ್ಥಿಗಳಾಗಿದ್ದಾರೆ. ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣೆಗೆ ಸ್ಪರ್ಧಿಸಿದ್ದರು ಎಂಬುದು ತಿಳಿದುಬಂದಿದೆ. 

90 ಸದಸ್ಯ ಬಲದ ಹರ್ಯಾಣ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ ಬಿಜೆಪಿಗೆ ಆರು ಸದಸ್ಯರ ಕೊರತೆ ಇದೆ.  ಪ್ರಸ್ತುತ 46 ಸದಸ್ಯರನ್ನು ಹೊಂದಿರುವ ಬಿಜೆಪಿ ಸರ್ಕಾರ  ರಚನೆಯಲ್ಲಿ ಈ  ಶಾಸಕರು  ಪ್ರಮುಖ ಪಾತ್ರ ವಹಿಸಲಿದ್ದಾರೆ.  ಕಾಂಗ್ರೆಸ್  31, ಜೆಜೆಪಿ 10, ಇಂಡಿಯನ್ ನ್ಯಾಷನಲ್ ಲೋಕ್ ದಳ್ ಹಾಗೂ ಹರ್ಯಾಣ ಲೋಕಹಿತ ಪಾರ್ಟಿ ತಲಾ 1 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಏಳು ಪಕ್ಷೇತರ ಶಾಸಕರಿದ್ದಾರೆ.

SCROLL FOR NEXT