ದೇಶ

ಪಕ್ಷೇತರರನ್ನು ಸೆಳೆಯಲು ಬಿಜೆಪಿ-ಶಿವಸೇನೆ ಮೈತ್ರಿಕೂಟದ ನಡುವೆ 'ಮಹಾ' ಸರ್ಕಸ್ ! 

Srinivas Rao BV

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ನಡುವಿನ ಅಧಿಕಾರ ಹಂಚಿಕೆಯ ಗೊಂದಲ ಮುಂದುವರೆದಿದ್ದು, ಈಗ ಪಕ್ಷೇತರರನ್ನು ತಮ್ಮತ್ತ ಸೆಳೆಯುವಲ್ಲಿ ಬಿಜೆಪಿ-ಶಿವಸೇನೆ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದೆ. 

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟಕ್ಕೆ ಪಕ್ಷೇತರರು, ಮಹಾರಾಷ್ಟ್ರದ ಸಣ್ಣ ಪುಟ್ಟ ರಾಜಕೀಯ ಪಕ್ಷಗಳ ಶಾಸಕರು ಬೆಂಬಲ ನೀಡಿದ್ದಾರೆ. ಪಕ್ಷೇತರ ಶಾಸಕರಾಗಿ ಆಯ್ಕೆಗೊಂಡಿರುವ ಗೀತಾ ಜೈನ್, ರಾಜೇಂದ್ರ ರಾವುತ್, ರವಿ ರಾಣ ಎಂಬ ಮೂವರು ಈಗಾಗಲೇ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಈ ಪೈಕಿ ಗೀತಾ ಜೈನ್ ಎಂಬುವವರು ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಮಿರಾ ಭಾಯಂದರ್ ಕ್ಷೇತ್ರದಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿಯನ್ನು ಪರಾಜಯಗೊಳಿಸಿದ್ದರು. ಗೆದ್ದ ಬೆನ್ನಲ್ಲೇ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿ ಬೆಂಬಲ ಘೋಷಿಸಿದ್ದರು. 

ಇನ್ನು ಶಾಸಕರಾಗಿ ಆಯ್ಕೆಯಾಗಿರುವ ಪ್ರಹಾರ್ ಜನಶಕ್ತಿ ಪಕ್ಷದ ನಾಯಕ, ಬಚ್ಚು ಕಡು ಹಾಗೂ ಅವರ ಸಹವರ್ತಿ ರಾಜ್ ಕುಮಾರ್ ಪಟೇಲ್ ಶಿವಸೇನೆಗೆ ಬೆಂಬಲ ಘೋಷಿಸಿದ್ದಾರೆ. ಇಬ್ಬರೂ ಸಹ ವಿದರ್ಭ ಪ್ರದೇಶದಲ್ಲಿರುವ ಅಮರಾವತಿ ಜಿಲ್ಲೆಯ ಅಚಲ್ ಪುರ ಹಾಗೂ ಮೇಲ್ಘಾಟ್ ನ ವಿಧಾನಸಭಾ ಕ್ಷೇತ್ರಗಳಿಂದ ಆಯ್ಕೆಯಾಗಿದ್ದಾರೆ.

SCROLL FOR NEXT