ದೇಶ

ಮಹಾರಾಷ್ಟ್ರ ಸರ್ಕಾರ ರಚನೆ ವಿಳಂಬ: ಬುಧವಾರ ಉದ್ದವ್ ಠಾಕ್ರೆ, ಅಮಿತ್ ಶಾ ಭೇಟಿ?

Nagaraja AB

ನಾಗ್ಪುರ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಒಂದು ವಾರ ಕಳೆದರೂ ಬಿಜೆಪಿ ಹಾಗೂ ಶಿವಸೇನೆ ಹಗ್ಗಜಗ್ಗಾಟದಿಂದಾಗಿ ಸರ್ಕಾರ ರಚನೆ ವಿಳಂಬವಾಗಿದೆ.

ಈ ಹಿನ್ನೆಲೆಯಲ್ಲಿ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬುಧವಾರ ಮುಂಬೈಗೆ ಭೇಟಿ ನೀಡಲಿದ್ದು, ನೂತನ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ. ಬಳಿಕ ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಅವರನ್ನು ಭೇಟಿ ಮಾಡಲಿದ್ದಾರೆ.

ಬಿಜೆಪಿ ಪಕ್ಷ ಸರ್ಕಾರ ರಚನೆಗೆ ತನ್ನನ್ನೇ ಹೆಚ್ಚು ಅವಲಂಬಿಸಿದೆ ಎಂಬ ಅಂಶವನ್ನು ಅರಿತಿರುವ ಶಿವಸೇನೆ 50-50 ಒಪ್ಪಂದಕ್ಕೆ ಬೇಡಿಕೆ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ , ಉದ್ದವ್ ಠಾಕ್ರೆಯೊಂದಿಗೆ ಸಭೆ ನಡೆಸಲಿದ್ದಾರೆ. 

ಸಮಾನ ಅಧಿಕಾರದ ಜೊತೆಗೆ ಮೊದಲ ಬಾರಿಗೆ ಶಾಸಕರಾಗಿರುವ ಉದ್ದವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬುದು ಶಿವಸೇನೆಯ ಬೇಡಿಕೆಯಾಗಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಅಕ್ಟೋಬರ್ 30 ಬುಧವಾರದಂದು ಬಿಜೆಪಿಯ ನೂತನ ಶಾಸಕರ ಸಭೆ ನಡೆಯಲಿದೆ. ಎಲ್ಲಾ ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಮಹಾರಾಷ್ಟ್ರ ಉಸ್ತುವಾರಿ ಸರೋಜ್ ಪಾಂಡೆ ಕೂಡಾ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಗಿರೀಶ್ ವ್ಯಾಸ್ ತಿಳಿಸಿದ್ದಾರೆ. 

ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಉದ್ದವ್ ಠಾಕ್ರೆ ಅವರನ್ನು ಅಮಿತ್ ಶಾ ಭೇಟಿ ಮಾಡಲಿದ್ದು, ಸರ್ಕಾರ ರಚನೆ ಸಂಬಂಧ ಚರ್ಚೆ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಆ ಮಧ್ಯೆ ಪ್ರತಿ ಬಾರಿಯೂ ಬಿಜೆಪಿಯ ಸಮಸ್ಯೆಗಳನ್ನು ತಮ್ಮ ಪಕ್ಷವು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಠಾಕ್ರೆ ಸ್ಪಷ್ಟಪಡಿಸಿದ್ದಾರೆ. 

SCROLL FOR NEXT