ದೇಶ

ಮಹಾ ಸಿಎಂ ಸ್ಥಾನ 50:50 - ವಿಡಿಯೋ ಬಿಡುಗಡೆ ಮಾಡುವ ಮೂಲಕ ಬಿಜೆಪಿಗೆ ಶಿವಸೇನೆ ತಿರುಗೇಟು

Lingaraj Badiger

ಮುಂಬೈ: ಮಿತ್ರ ಪಕ್ಷ ಶಿವಸೇನೆಗೆ ಎರಡೂವರೆ ವರ್ಷ ಸಿಎಂ ಸ್ಥಾನ ಬಿಟ್ಟುಕೊಡುವುದಾಗಿ ಬಿಜೆಪಿ ಭರವಸೆ ನೀಡಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಹೇಳಿದ ಬೆನ್ನಲ್ಲೇ, ಹುದ್ದೆ ಹಂಚಿಕೆಗೆ ಸಂಬಂಧಿಸಿದ ಹಳೆ ವಿಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ ಕೇಸರಿ ಪಕ್ಷಕ್ಕೆ ಉದ್ಧವ್ ಠಾಕ್ರೆ ಪಕ್ಷ ತಿರುಗೇಟು ನೀಡಿದೆ.

50:50 ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಕೊನೆಗೂ ಇಂದು ಮೌನ ಮುರಿದ ಫಡ್ನವಿಸ್ ಅವರು, 2019ರ ಲೋಕಸಭೆ ಚುನಾವಣೆಗೂ ಮುನ್ನ ಮೈತ್ರಿ ಮಾಡಿಕೊಂಡಿದ್ದ ಸಂದರ್ಭದಲ್ಲಿ ಎರಡೂವರೆ ವರ್ಷ ಸಿಎಂ ಹುದ್ದೆ ಬಿಟ್ಟುಕೊಡುವುದಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಭರವಸೆ ನೀಡಿಲ್ಲ ಎಂದು ಹೇಳಿದ್ದರು. 

ಇದರ ಬೆನ್ನಲ್ಲೇ  ಶಿವಸೇನೆ ವಿಡಿಯೋವೊಂದನ್ನು ಸಾಮಾಜಿಕ ತಾಣದಲ್ಲಿ ಬಿಡುಗಡೆ ಮಾಡಿದ್ದು, ಕಳೆದ ವರ್ಷ ಫೆಬ್ರವರಿ 18ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಬಿಜೆಪಿ - ಶಿವಸೇನೆ ಮೈತ್ರಿ ಮತ್ತೆ ಅಧಿಕಾರಕ್ಕೆ ಬಂದರೆ, ಹುದ್ದೆ ಮತ್ತು ಜವಾಬ್ದಾರಿಗಳನ್ನು ಸಮಾನವಾಗಿ ಹಂಚಿಕೊಳ್ಳುವುದಾಗಿ ಫಡ್ನವಿಸ್ ಹೇಳಿದ್ದಾರೆ. ಫಡ್ನವಿಸ್ ಅವರ ಈ ವಿಡಿಯೋವನ್ನು ಉದ್ಧವ್ ಠಾಕ್ರೆ ಅವರ ಆಪ್ತ ಹರ್ಷಲ್ ಪ್ರಧಾನ್ ಅವರು 'ನಿಮ್ಮ ಭರವಸೆಯನ್ನು ಸ್ವಲ್ಪ ನೆನಪಿಸಿಕೊಳ್ಳಿ' ಎಂಬ ಅಡಿ ಬರಹದೊಂದಿಗೆ ಪೋಸ್ಟ್ ಮಾಡಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮುಗಿದು ಫಲಿತಾಂಶ ಹೊರಬಂದು ಬಿಜೆಪಿ-ಶಿವಸೇನೆ ಪರ ಜನ ತೀರ್ಪು ಕೊಟ್ಟ ನಂತರ ಇದೀಗ ಅಧಿಕಾರಕ್ಕಾಗಿ ಎರಡೂ ಪಕ್ಷಗಳ ಮಧ್ಯೆ ಜಗಳ, ಭಿನ್ನಾಭಿಪ್ರಾಯಗಳು ಆರಂಭವಾಗಿದೆ. ಮುಂದಿನ ಸರ್ಕಾರ ರಚನೆ ಮಾಡುವುದು ಹೇಗೆ, ಯಾವ ಪಕ್ಷಕ್ಕೆ ಎಷ್ಟು ಅಧಿಕಾರ ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಮಧ್ಯೆ ಸಿಎಂ ಹುದ್ದೆ ತನಗೂ ಬೇಕು ಎಂದು ಶಿವಸೇನೆ ಪಟ್ಟು ಹಿಡಿದಿದೆ. ಅಲ್ಲದೆ ಉದ್ಧವ್ ಠಾಕ್ರೆ ಅವರ ಪುತ್ರ, ಮೊದಲ ಬಾರಿಗೆ ಶಾಸಕರಾಗಿರುವ ಆದಿತ್ಯ ಠಾಕ್ರೆ ಅವರನ್ನು ಸಿಎಂ ಮಾಡಬೇಕು ಎಂದು ಶಿವಸೇನೆ ಶಾಸಕರು ಒತ್ತಾಯಿಸಿದ್ದಾರೆ.

ಅಧಿಕಾರವನ್ನು 50:50 ಪ್ರಮಾಣದಲ್ಲಿ ಹಂಚಿಕೆ ಮಾಡಿದರೆ ಬೆಂಬಲ ನೀಡುವುದಾಗಿ ಶಿವಸೇನೆ ಹೇಳುತ್ತಿದ್ದು, ಅಧಿಕಾರ ಸಮಾನ ಹಂಚಿಕೆ ಬಗ್ಗೆ ಪತ್ರದ ಮೂಲಕ ಭರವಸೆ ನೀಡಬೇಕು ಎಂದು ಆಗ್ರಹಿಸಿದೆ.

SCROLL FOR NEXT