ದೇಶ

ಮಹಾ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಂದ್ರ ಫಡ್ನವಿಸ್ ಮರು ಆಯ್ಕೆ

Lingaraj Badiger

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಬುಧವಾರ ಮತ್ತೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ.

ಇಂದು ದಕ್ಷಿಣ ಮುಂಬೈನ ವಿಧಾನ ಭವನದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಇತ್ತೀಚಿಗೆ ಆಯ್ಕೆಯಾದ ಎಲ್ಲಾ 105 ಬಿಜೆಪಿ ಶಾಸಕರು ಹಾಜರಿದ್ದರು. 

ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಪಕ್ಷದ ಉಪಾಧ್ಯಕ್ಷ ಅವಿನಾಶ್ ರೈ ಖನ್ನ ಅವರು ಕೇಂದ್ರದ ವೀಕ್ಷಕರಾಗಿ ಆಗಮಿಸಿದ್ದರು.

ಸಭೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಫಡ್ನವಿಸ್ ಹೊರತುಪಡಿಸಿ ಬೇರೆ ಯಾವುದೇ ಹೆಸರು ಪ್ರಸ್ತಾಪವಾಗಿಲ್ಲ ಎಂದು ತೋಮರ್ ಅವರು ಹೇಳಿದ್ದಾರೆ.

ತಮ್ಮ ಮೇಲೆ ವಿಶ್ವಾಸವಿಟ್ಟು ಮತ್ತೆ ತಮ್ಮನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದ ಎಲ್ಲಾ ಶಾಸಕರಿಗೆ ಹಾಗೂ ಪಕ್ಷದ ನಾಯಕರಿಗೆ ಸಿಎಂ ಫಡ್ನವಿಸ್ ಧನ್ಯವಾದ ಹೇಳಿದರು. ಅಲ್ಲದೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೂ ಧನ್ಯವಾದ ಹೇಳಿದರು.
 

SCROLL FOR NEXT