ದೇಶ

ಸದ್ಯದಲ್ಲಿಯೇ ಬಿಜೆಪಿ-ಶಿವಸೇನೆ 'ಮಹಾಯುತಿ'ಸರ್ಕಾರ ರಚಿಸುತ್ತೇವೆ: ದೇವೇಂದ್ರ ಫಡ್ನವಿಸ್ 

Sumana Upadhyaya

ಮುಂಬೈ; ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಸರ್ಕಾರ ರಚನೆ ಸಂಬಂಧ ವಿವಾದಗಳು ನಡೆಯುತ್ತಿರುವುದರ ಮಧ್ಯೆ ಬುಧವಾರ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಗೊಂಡಿರುವ ದೇವೇಂದ್ರ ಫಡ್ನವಿಸ್ ಸದ್ಯದಲ್ಲಿಯೇ ನಾವು ಸರ್ಕಾರ ರಚಿಸುವುದು ಖಚಿತ ಎಂದಿದ್ದಾರೆ. 


ಸರ್ಕಾರ ರಚಿಸಲು ಬದಲಿ ಸೂತ್ರವನ್ನು ಹುಡುಕಲಾಗುತ್ತಿದೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿದ ಅವರು ಅವೆಲ್ಲ ಕೇವಲ ಮನರಂಜನೆಗಾಗಿ ಹಬ್ಬಿಸುತ್ತಿರುವ ಸುದ್ದಿಯಷ್ಟೆ ಎಂದಿದ್ದಾರೆ.


ಈ ಬಾರಿಯ ಚುನಾವಣೆಯಲ್ಲಿ ಮಹಾರಾಷ್ಟ್ರ ಜನತೆಯ ತೀರ್ಪು ಮಹಾಯುತಿ(ಬಿಜೆಪಿ-ಶಿವಸೇನೆ ಮೈತ್ರಿಕೂಟ) ಪರವಾಗಿದೆ. ಸದ್ಯದಲ್ಲಿಯೇ ಮಹಾಯುತಿ ಸರ್ಕಾರ ರಚಿಸಲಿದೆ ಎಂದರು. ಅವರು ಇಂದು ನೂತನ ಬಿಜೆಪಿ ಶಾಸಕರನ್ನು ಉದ್ದೇಶಿಸಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದರು.


1995ರ ನಂತರ 288 ಸದಸ್ಯರ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಪಕ್ಷ ಕೂಡ 75ಕ್ಕಿಂತ ಹೆಚ್ಚು ಸೀಟುಗಳನ್ನು ಗೆದ್ದಿಲ್ಲ. ಆದರೆ ಬಿಜೆಪಿ 2014ರಲ್ಲಿ 122 ಸೀಟುಗಳು ಮತ್ತು ಈ ಬಾರಿಯ ಚುನಾವಣೆಯಲ್ಲಿ 105 ಸೀಟುಗಳನ್ನು ಗೆದ್ದಿದೆ ಎಂದು ಸಮರ್ಥಿಸಿಕೊಂಡರು.


ಇನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಮಾತನಾಡಿ, ಕಳೆದ 5 ವರ್ಷಗಳಲ್ಲಿ ಬಿಜೆಪಿಯಿಂದ ಯಾರು ಕೂಡ ದೆಹಲಿಗೆ ಹೋಗಿ ಫಡ್ನವಿಸ್ ಅವರ ಬದಲಿಗೆ ಬೇರೆಯವರನ್ನು ನಾಯಕನನ್ನಾಗಿ ಆಯ್ಕೆ ಮಾಡಿ ಎಂದು ಕೇಳಿಕೊಂಡಿಲ್ಲ. ಕಳೆದ 5 ವರ್ಷಗಳಲ್ಲಿ ಹಲವು ಪ್ರತಿಭಟನೆ, ಚಳವಳಿ ನಡೆದಿರಬಹುದು, ಆದರೆ ಫಡ್ನವಿಸ್ ಅವರು ರಾಜೀನಾಮೆ ನೀಡಬೇಕೆಂದು ಯಾರೂ ಕೇಳಿಲ್ಲ. ಅದು ಅವರ ಕೌಶಲ್ಯ ಮತ್ತು ರಾಜ್ಯಾದ್ಯಂತ ಜನರು ಅವರನ್ನು ಒಪ್ಪಿಕೊಂಡಿದ್ದಾರೆ ಎಂದು ತೋರಿಸುತ್ತದೆ ಎಂದರು.


ಅಕ್ಟೋಬರ್ 21ರಂದು ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಂದ ನಂತರ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಶಿವಸೇನೆ, 50:50 ಸೂತ್ರವನ್ನು ಪಾಲಿಸಬೇಕೆಂದು ಕೇಳುತ್ತಾ ಬಂದಿದೆ. 

SCROLL FOR NEXT