ದೇಶ

ವಿಧಿ 370 ರದ್ಧತಿ: ಗೃಹಬಂಧನದಲ್ಲಿರುವ ಮೆಹಬೂಬಾ ಮುಫ್ತಿ ಭೇಟಿಯಾದ ಅವರ ತಾಯಿ, ಸಹೋದರಿ

Srinivasamurthy VN

ಸಂಬಂಧಿಕರ ಭೇಟಿಯಾದ ಒಮರ್ ಅಬ್ದುಲ್ಲಾ, 20 ನಿಮಿಷ ಚರ್ಚೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುತ್ತಿದ್ದ 370 ನೇ ವಿಧಿಯನ್ನು ತೆಗೆದುಹಾಕಿದ ಬಳಿಕ ಮುಂಜಾಗ್ರತಾ ಕ್ರಮವಾಗಿ ಗೃಹ ಬಂಧನದಲ್ಲಿರಿಸಲಾಗಿದ್ದ ಮಾಜಿ ಸಿಎಂಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಅವರನ್ನು ಅವರ ಸಂಬಂಧಿಕರು ಭೇಟಿ ಮಾಡಲು ಅನುವು ಮಾಡಿಕೊಡಲಾಗಿದೆ.

ಕಾಶ್ಮೀರದಲ್ಲಿ ದಿನಕಳೆದಂತೆ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಆದರೆ ಭದ್ರತೆಯ ವಿಷಯದಿಂದಾಗಿ ಕೆಲವು ಕಾಶ್ಮೀರಿ ನಾಯಕರು ಇನ್ನೂ ಗೃಹಬಂಧನದಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ ಮತ್ತು ಇತರ ನಾಯಕರನ್ನು ಸಹ ಗೃಹಬಂಧನದಲ್ಲಿರಿಸಲಾಗಿದೆ. 

ಇದೀಗ ಗೃಹ ಬಂಧನದಲ್ಲಿರಿಸಲಾಗಿದ್ದ ಮಾಜಿ ಸಿಎಂಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಅವರನ್ನು ಅವರ ಸಂಬಂಧಿಕರು ಭೇಟಿ ಮಾಡಲು ಅನುವು ಮಾಡಿಕೊಡಲಾಗಿದೆ. ಶ್ರೀನಗರದ ಚಶ್ಮಾಶಾಹಿ ರೆಸಾರ್ಟ್‌ನಲ್ಲಿ ಮೆಹಬೂಬಾ ಮುಫ್ತಿಯನ್ನು ಗೃಹಬಂಧನದಲ್ಲಿರಿಸಲಾಗಿದ್ದು, ಗೃಹಬಂಧನದಲ್ಲಿರುವ ಮೆಹಬೂಬಾ ಮುಫ್ತಿ ಅವರನ್ನು ಗುರುವಾರ ಸಂಜೆ ಅವರ ತಾಯಿ ಮತ್ತು ಸಹೋದರಿ ರುಬ್ಯಾ ಸಯೀದ್ ಮೆಹಬೂಬಾ ಭೇಟಿಯಾದರು.  ಮೂಲಗಳ ಪ್ರಕಾರ, ಮೆಹಬೂಬಾ ಮುಫ್ತಿ ಅವರ ಸಹೋದರಿ ರುಬ್ಯಾ ಸಯೀದ್ ಗುರುವಾರ ಸಂಜೆ 4 ಗಂಟೆಗೆ ಶ್ರೀನಗರಕ್ಕೆ ತಲುಪಿ ಅವರನ್ನು ಭೇಟಿಯಾದರು. ಯಾವುದೇ ನಾಯಕನ ಕುಟುಂಬಗಳನ್ನು ಭೇಟಿ ಮಾಡಲು ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ ಎಂದು ಹೇಳಲಾಗಿದೆ.

ಆಗಸ್ಟ್ 27 ರಂದು ಸಂಜೆ 5 ಗಂಟೆಗೆ ಡಿಸಿ ಕಚೇರಿಯಲ್ಲಿ ಮೆಹಬೂಬಾ ಮುಫ್ತಿ ಅವರ ಪುತ್ರಿ ಸನಾ ಅವರು ಮೊದಲು ಮೆಹಬೂಬಾ ಮುಫ್ತಿ ಭೇಟಿಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಮೆಹಬೂಬಾ ಮುಫ್ತಿ ಅವರ ಭೇಟಿಗೆ ಆಡಳಿತದಿಂದ ಯಾವುದೇ ಅನುಮತಿ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ ಎಂದು ಸರ್ಕಾರಿ ಮೂಲಗಳಿಂದ ಹೇಳಲಾಗುತ್ತಿದೆ. 

ಇನ್ನು ಶ್ರೀನಗರದ ಹರಿನಿವಾಸದಲ್ಲಿರುವ ಒಮರ್ ಅಬ್ದುಲ್ಲಾ ಅವರ ನಿವಾಸಕ್ಕೂ ಈ ವಾರ 2 ಬಾರಿ ಅವರ ಸಂಬಂಧಿಕರು ತೆರಳಿ ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಒಮರ್ ಅಬ್ದುಲ್ಲಾ ಅವರ ಸಹೋದರಿ ಸಫಿಯಾ ಮತ್ತು ಅವರ ಮಕ್ಕಳ ಭೇಟಿಗೆ ಅವಕಾಶ ನೀಡಲಾಗಿತ್ತು. ಕುಟುಂಬಸ್ಥರು ಸುಮಾರು 8 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT