ದೇಶ

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣ; ಪಿ ಚಿದಂಬರಂಗೆ ತಾತ್ಕಾಲಿಕ ರಿಲೀಫ್, ಸೆ.5ರಂದು ನಿರೀಕ್ಷಣಾ ಜಾಮೀನು ಅರ್ಜಿ ತೀರ್ಪು

Srinivasamurthy VN

ನವದೆಹಲಿ: ಐಎನ್‌ಎಕ್ಸ್‌ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ  ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ತಾತ್ಕಾಲಿಕ  ರಿಲೀಫ್ ದೊರೆತಿದ್ದು, ಚಿದಂಬರಂರನ್ನು ತಿಹಾರ್ ಜೈಲಿಗೆ ಕಳುಹಿಸದಂತೆ ಕೋರ್ಟ್ ಸಿಬಿಐಗೆ ಸೂಚನೆ ನೀಡಿದೆ.

ಮೂಲಗಳ ಪ್ರಕಾರ ಚಿದಂಬರಂ ಅವರನ್ನು ತಿಹಾರ್ ಜೈಲಿಗೆ ಕಳುಹಿಸದಂತೆ ಮತ್ತು ಸಿಬಿಐ ಪ್ರಧಾನ ಕಚೇರಿಯಲ್ಲೇ ಗುರುವಾರದವರೆಗೂ ಇರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಸೂಚಿಸಿದೆ ಎನ್ನಲಾಗಿದೆ. ಜತೆಗೆ, ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಪರಿಗಣಿಸುವಂತೆಯೂ ಕೆಳ ವಿಚಾರಣಾ ನ್ಯಾಯಾಲಯಕ್ಕೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ.

ಅದರಂತೆ ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಇದೇ ಸೆಪ್ಟೆಂಬರ್ 5ರಂದು ನಡೆಸುವ ಕುರಿತು ಮಾಹಿತಿ ಲಭ್ಯವಾಗಿದೆ.

ಚಿದಂಬರಂ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿ, 'ಸಿಬಿಐ ಕಸ್ಟಡಿಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವಾಗ ಅವರನ್ನು ತಿಹಾರ್ ಜೈಲಿಗೆ ಯಾಕೆ ಕಳುಹಿಸಬೇಕು? ಸದ್ಯದ ಮಟ್ಟಿಗೆ ಅವರಿಗೆ ಗೃಹಬಂಧನ ಸಾಕು. ನ್ಯಾಯ ಒದಗಿಸಬೇಕು' ಎಂದು ಮನವಿ ಮಾಡಿದ್ದರು. ಇದನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್‌, ಚಿದಂಬರಂ ಅವರನ್ನು ಜೈಲಿಗೆ ಕಳುಹಿಸದಂತೆ ಆದೇಶಿಸಿದೆ. ಜಾಮೀನುರಹಿತ ವಾರಂಟ್ ಪ್ರಶ್ನಿಸಿ ಚಿದಂಬರಂ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿ ಆರ್.ಬಾನುಮತಿ ಮತ್ತು ಎ.ಎಸ್.ಬೋಪಣ್ಣ ಅವರಿದ್ದ ನ್ಯಾಯಪೀಠ ಸಿಬಿಐಗೆ ಸೂಚಿಸಿದೆ.

SCROLL FOR NEXT