ನವ ದೆಹಲಿ: ನೋಟ್ ರದ್ದತಿ ವೇಳೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಇಂದು ಕೂಡಾ ಮೂರನೇ ಬಾರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.
ಕಳೆದ ಶುಕ್ರವಾರ ಹಾಗೂ ಶನಿವಾರ ಇಡಿ ವಿಚಾರಣೆಗೆ ಹಾಜರಾಗಿದ್ದ ಡಿಕೆ ಶಿವಕುಮಾರ್ ಇಂದು ಬೆಳಗ್ಗೆಯಿಂದಲೂ ರಾತ್ರಿ 8-30ರವರೆಗೂ ಜಾರಿನಿರ್ದೇಶನಾಲಯದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.
ಇಡಿ ವಿಚಾರಣೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ನಾಳೆಯೂ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಬರುವಂತೆ ತಿಳಿಸಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಉಪಮುಖ್ಯಮಂತ್ರಿ ಡಾ. ಅಶ್ವತ್ ನಾರಾಯಣ್ ಅವರ ಹೇಳಿಕೆ ವಿರುದ್ಧ ಗರಂ ಆದ ಡಿಕೆ ಶಿವಕುಮಾರ್, ರಾಜಕೀಯವಾಗಿ ಏನೇ ಬಂದರೂ ಧೈರ್ಯವಾಗಿ ಎದುರಿಸುತ್ತೇನೆ. ಯಾವುದಕ್ಕೂ ಹೆದರುವ ಮಗನಲ್ಲ, ನಾನು ಮನುಷ್ಯನಾಗಿರುವುದರಿಂದ ಭಾವುಕನಾಗಿ ಕಣ್ಣೀರು ಹಾಕಿದ್ದೇನೆ. ಯಾರೊಬ್ಬರ ಅನುಕಂಪ ಗಿಟ್ಟಿಸುವ ಅನೀವಾರ್ಯತೆ ಇಲ್ಲ, ಅಶ್ವತ್ ನಾರಾಯಣ್ ಬಹಳ ದೊಡ್ಡವರು, ಅವರ ಸಲಹೆ ಸ್ವೀಕರಿಸುತ್ತೇನೆ ಎಂದರು.
ಗುಜರಾತ್ ಕಾಂಗ್ರೆಸ್ ಶಾಸಕರನ್ನು ಏಕೆ ರಕ್ಷಿಸಬೇಕಿತ್ತು ಎಂದು ಉಪಮುಖ್ಯಮಂತ್ರಿಯೊಬ್ಬರು ಹೇಳಿಕೆ ನೀಡುತ್ತಾರೆ. ಇದು ರಾಜಕೀಯ ಪ್ರೇರಿತ ಪ್ರಕರಣ ಎಂಬುದು ಈ ಹೇಳಿಕೆಯಿಂದಲೇ ಸ್ಪಷ್ಟವಾಗುತ್ತದೆ ಎಂದು ಡಿಕೆ ಶಿವಕುಮಾರ್ ಹೇಳಿದರು.