ದೇಶ

ವೀಡಿಯೋ: ಏರ್ ಚೀಫ್ ಜತೆಗೆ ಮಿಗ್ -21ನಲ್ಲಿ ಹಾರಾಡಿದ ವಿಂಗ್ ಕಮಾಂಡರ್ ಅಭಿನಂದನ್

Raghavendra Adiga

ಮಿಗ್ 21 ವಿಮಾನ ಬಳಸಿ ಪಾಕಿಸ್ತಾನದ ಎಫ್ 16 ಅನ್ನು ಹೊಡೆದುರುಳಿಸಿದ್ದಲ್ಲದೆ ಪಾಕ್ ಸೇನಾಪಡೆಗಳಿಗೆ ಸಿಕ್ಕು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮನ್ ಸೋಮವಾರ ಮತ್ತೆ ಮಿಗ್ -21 ಹಾರಾಟ ನಡೆಸಿದ್ದಾರೆ. ಈ ಬಾರಿ ಅವರು ಏರ್ ಚೀಫ್ ಮಾರ್ಷಲ್ ಬೀರೇಂದರ್ ಸಿಂಗ್ ಧನೋವಾ ಅವರೊಂದಿಗೆ ವಿಮಾನದಲ್ಲಿ ಹಾರಾಟ ನಡೆಸಿ ಗಮನ ಸೆಳೆದಿದ್ದಾರೆ.

"ಪಂಜಾಬ್‌ನ ಪಠಾಣ್‌ಕೋಟ್ ವಾಯುನೆಲದಿಂದ ಅಭಿನಂದನ್ ಹಾಗೂ ಏರ್ ಚೀಫ್ ಮಾರ್ಷಲ್ ಅವರನ್ನೊಳಗೊಂಡ ವಿಮಾನ ಹಾರಾಟ ನಡೆಸಿದೆ.ಸಂಪೂರ್ಣ ವೈದ್ಯಕೀಯ ತಪಾಸಣೆಯ ನಂತರ ಅಭಿನಂದನ್ ಅವರನ್ನು ಕಳೆದ ತಿಂಗಳು ವಿಮಾನ ಹಾರಾಟ ಹುದ್ದೆಗೆ ಮತ್ತೆ ಪರಿಗಣಿಸಲಾಗಿದೆ." ಎಂದು ಐಎಎಫ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಎಎಫ್ ಮೂಲಗಳ ಪ್ರಕಾರ ಈ ವಿಮಾನ ಹಾರಾಟ ಸುಮಾರು ಅರ್ಧ ತಾಸಿನವರೆಗೆ ನಡೆದಿದೆ.ಹಾಗೇ ಇದು ತರಬೇತಿನಿರತ ಮಿಗ್ -21 ವಿಮಾನದ ಹಾರಾಟವೆಂದು ಹೇಳಲಾಗಿದೆ.

ಫೆ. 27ರ ಬಳಿಕ ವಿಮಾನ ಹಾರಾಟದಿಂದ ದೂರವುಳಿದಿದ್ದ ಅಭಿನಂದನ್ ಆಗಸ್ಟ್ ನಲ್ಲಿ ಮತ್ತೆ ತಮ್ಮ ವೃತ್ತಿಗೆ ಮರಳಿದ್ದರು. ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ ಅಭಿನಂದನ್ ವಿಮಾನ ಹಾರಾಟ ನಡೆಸಲು ಬೇಕಾದ ವೈದ್ಯಕೀಯ ಅರ್ಹತೆ ಹೊಂದಿದ್ದಾರೆಂದು ಖಾತ್ರಿ ಪಡಿಸಿದ ನಂತರ ಅವರನ್ನು ಪೈಲಟ್ ಹುದ್ದೆಗೆ ಮರುಪರಿಗಣಿಸಲಾಗಿದೆ.

ಫೆಬ್ರವರಿ 27 ರಂದು ಪಾಕಿಸ್ತಾನದ ಎಫ್ -16 ರೊಂದಿಗಿನ ಮುಖಾಮುಖಿ ಕಾದಾಟದ ಬಳಿಕ ಶತ್ರುಗಳ ನೆಲದಲ್ಲಿ ಅಭಿನಂದನ್ ಪ್ರದರ್ಶಿಸಿದ್ದ ಶೌರ್ಯಕ್ಕಾಗಿ, ಈ ವರ್ಷದ ಸ್ವಾತಂತ್ರ್ಯ ದಿನದಂದು ಅವರಿಗೆ ವೀರ ಚಕ್ರ ಪುರಸ್ಕಾರ ಕೊಟ್ಟು ಸನ್ಮಾನಿಸಲಾಗಿದೆ.

SCROLL FOR NEXT