ದೇಶ

ನಾಲ್ಕು ದಿನಗಳ ಇಡಿ ವಿಚಾರಣೆ ಬಳಿಕ ಡಿಕೆ ಶಿವಕುಮಾರ್ ಬಂಧನ

Nagaraja AB

ನವದೆಹಲಿ:  ನೋಟ್ ರದ್ದತಿ ವೇಳೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕು ದಿನಗಳಿಂದ  ವಿಚಾರಣೆ ಎದುರಿಸುತ್ತಿದ್ದ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ. ಕೆ. ಶಿವಕುಮಾರ್  ಅವರನ್ನು ಇಂದು ಬಂಧಿಸಲಾಗಿದೆ.

ನೋಟು ರದ್ದತಿ ವೇಳೆ ದೆಹಲಿಯ ಫ್ಲಾಟ್ ನಲ್ಲಿ 8. 59 ಕೋಟಿ ಹಣ ಸಿಕ್ಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಶುಕ್ರವಾರದಿಂದಲೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಡಿಕೆ ಶಿವಕುಮಾರ್ ವಿಚಾರಣೆಗೆ ಹಾಜರಾಗಿದ್ದರು. ಆದರೆ, ತನಿಖೆಗೆ ಸಹಕರಿಸದಿರುವ ಆರೋಪದ ಮೇರೆಗೆ  ಅವರನ್ನು ಬಂಧಿಸಲಾಗಿದ್ದು, ಇಂದು ರಾತ್ರಿ ಅಥವಾ ನಾಳೆ ಕೋರ್ಟ್ ನಲ್ಲಿ ಹಾಜರುಪಡಿಸುವ ಸಾಧ್ಯತೆ ಇದೆ.

ವಿಚಾರಣೆ  ವೇಳೆಯಲ್ಲಿ ಡಿಕೆ ಶಿವಕುಮಾರ್ ತನಿಖೆಗೆ ಸಹಕರಿಸದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆಗೆ ತಮ್ಮ ವಶಕ್ಕೆ ನೀಡುವಂತೆ ಇಡಿ ನ್ಯಾಯಾಲಯದ ಬಳಿ ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ. 

ಇದಕ್ಕೂ ಮುನ್ನ ದೆಹಲಿಯ ಆರ್ ಎಂಎಲ್ ಆಸ್ಪತ್ರೆಯಲ್ಲಿ ಡಿಕೆ ಶಿವಕುಮಾರ್ ಅವರಿಗೆ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ. ಬಳಿಕ ತಿಹಾರ್  ಜೈಲಿಗೆ ಕಳುಹಿಸುವ ಸಾಧ್ಯತೆ ಇದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

SCROLL FOR NEXT