ದೇಶ

ಕಾಶ್ಮೀರದಲ್ಲಿ ಬಂಧಕನಕ್ಕೊಳಗಾದ ಉಗ್ರರಿಂದ ಸ್ಫೋಟಕ ಮಾಹಿತಿ ಬಹಿರಂಗ!

Manjula VN

ನವದೆಹಲಿ: ಆರ್ಟಿಕಲ್ 370 ರದ್ದುಗೊಂಡ ಬಳಿಕ ಪಾಕಿಸ್ತಾನಕ್ಕೆ ಭಾರತ ಮೇಲಿನ ಹಗೆ ಮತ್ತಷ್ಟು ಹೆಚ್ಚಾಗಿದ್ದು, ಇದೀಗ ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಹೊಂಚು ಹಾಕುತ್ತಿದೆ. ಈ ಹಿಂದೆಯೇ ಪಾಕಿಸ್ತಾನ ಭಾರತದ ಮೇಲೆ ಉಗ್ರರ ದಾಳಿ ನಡೆಸುವ ಬಗ್ಗೆ ಬೆದರಿಕೆ ಹಾಕಿತ್ತು. ಇದರ ಬೆನ್ನಲ್ಲೇ ಇದೀಗ ಸ್ಫೋಟಕ ಮಾಹಿತಿಯೊಂದು ಬಹಿರಂಗಗೊಂಡಿದೆ. 

ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರುವ ಪಾಕಿಸ್ತಾನ ಉಗ್ರರನ್ನು ಗಡಿ ನುಸುಳಿಸಲು ಸಹಾಯ ಮಾಡುತ್ತಿದ್ದು, ಇದೀಗ ಭಾರತೀಯ ಸೇನಾಪಡೆಗಳ ಕೈಗೆ ಸಿಕ್ಕಿ ಹಾಕಿಕೊಂಡಿರುವ ಪಾಕಿಸ್ತಾನದ ಇಬ್ಬರು ಉಗ್ರರು ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. 

ಕಾಶ್ಮೀರದೊಳಗೆ ಉಗ್ರರನ್ನು ಕಳುಹಿಸಿ ವಿಧ್ವಂಸಕ ಕೃತ್ಯ ನಡೆಸಲು ಪಾಕಿಸ್ತಾನ ಸಿದ್ಧತೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. 

ಕಳೆದ ವಾರ ಬಂಧನಕ್ಕೊಳಗಾಗಿರುವ ಪಾಕಿಸ್ತಾನದ ಉಗ್ರರಾದ ನಜ್ನೀನ್ ಖೊಖರ್ (25) ಹಾಗೂ ಖಲೀಲ್ ಅಹ್ಮದ್ ಕಯಾನಿ (36) ಹಲವು ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾರೆ. 

ಪಾಕಿಸ್ತಾನ ಸೇನೆ ಈಗಾಗಲೇ ಹಲವು ಉಗ್ರರಿಗೆ ತರಬೇತಿ ನೀಡುತ್ತಿದ್ದು, ಅವರನ್ನು ಭಾರತದ ಗಡಿಯೊಳಗೆ ನುಸುಳಿಸಿ ಕಾಶ್ಮೀರದ ಶಾಂತಿ ಹಾಳು ಮಾಡಲು ತಯಾರಿ ನಡೆಸಿದೆ. ಭಾರತದೊಳಗೆ ನುಸುಳಲು ಗಡಿ ನಿಯಂತ್ರಣ ರೇಖೆ ಬಳಿ 50ಕ್ಕೂ ಹೆಚ್ಚು ಉಗ್ರರು ಸಿದ್ಧರಾಗಿ ನಿಂತಿದ್ದಾರೆ ಎಂದು ಹೇಳಿದ್ದಾರೆ. 

ಪಾಕಿಸ್ತಾನದ ಲಷ್ಕರ್-ಇ-ತೊಬ್ಯಾ ಸಂಘಟನೆಯಿಂದ ತರಬೇತಿ ಪಡೆದ 7 ಉಗ್ರರನ್ನು ಈಗಾಗಲೇ ಭಾರತದೊಳಗೆ ಕಳುಹಿಸಿದೆ. ಪ್ರಸ್ತುತ ಬಂಧನಕ್ಕೊಳಗಾಗಿರುವ ಈ ಇಬ್ಬರೂ ಉಗ್ರರು ಇದೇ ಸಂಘಟನೆಯಿಂದ ತರಬೇತಿ ಪಡೆದು ಬಂದಿರುವ ಉಗ್ರರಾಗಿದ್ದು, ಭಾರತೀಯ ಸೇನಾ ಸಿಬ್ಬಂದಿಗಳೇ ಇವರ ಪ್ರಮುಖ ಗುರಿ ಎಂದು ಹೇಳಲಾಗುತ್ತಿದೆ. 

ಈಗಾಗಲೇ ಭಾರತದೊಳಗೆ ನುಸುಳಿರುವ ಒಟ್ಟು 7 ಮಂದಿ ಉಗ್ರರಲ್ಲಿ ಮೂವರು ಅಫ್ಘಾನ್ ಪ್ರಜೆಗಳಾಗಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಬಳಕೆ ಬಗ್ಗೆ ತರಬೇತಿ ಪಡೆದಿದ್ದಾರೆಂದು ತಿಳಿದುಬಂದಿದೆ. 

SCROLL FOR NEXT