ದೇಶ

ಪಂಜಾಬ್: ಪಟಾಕಿ ಕಾರ್ಖಾನೆ ಸ್ಫೋಟದಲ್ಲಿ ಮೃತರ ಸಂಖ್ಯೆ 20ಕ್ಕೇರಿಕೆ, 27 ಮಂದಿಗೆ ಗಾಯ

Lingaraj Badiger

ಬಟಾಲಾ: ಪಂಜಾಬ್ ನ ಗುರುದಾಸ್ ಪುರ್ ಜಿಲ್ಲೆಯ ಬಟಾಲಾದಲ್ಲಿನ ನಾಮ್ದಾರಿ ಪಟಾಕಿ ಕಾರ್ಖಾನೆಯಲ್ಲಿ ನಿನ್ನೆ ಸಂಭವಿಸಿದ ಆಕಸ್ಮಿಕ ಅಗ್ನಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 20ಕ್ಕೇರಿದೆ. ಗಾಯಗೊಂಡವರ ಸಂಖ್ಯೆಯೂ 27ಕ್ಕೇರಿದೆ. ಇನ್ನೂ ಹಲವರು ಅವಶೇಷಗಳಡಿಯಲ್ಲಿ ಸಿಲುಕಿ ಹಾಕಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಸ್ಥಳಕ್ಕೆ ಅಗ್ನಿಶಾಮಕದಳದವರು ಆಗಮಿಸಿದ್ದು, ಬೆಂಕಿ ನಂದಿಸುವ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಬಟಾಲಾ ವಸತಿ ಪ್ರದೇಶದಲ್ಲಿರುವ ಕಾರ್ಖಾನೆಯಲ್ಲಿ ನಿನ್ನೆ ಸಂಜೆ 4 ಗಂಟೆಯ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ ಎಂದು ಇನ್ಸ್ ಪೆಕ್ಟರ್ ಜನರಲ್ ಎಸ್ ಪಿಎಸ್ ಪರ್ಮರ್ ಅವರು ಪಿಟಿಐಗೆ ತಿಳಿಸಿದ್ದಾರೆ. ಸ್ಫೋಟದಿಂದಾಗಿ ಪಕ್ಕದ ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಪರ್ಮರ್ ಹೇಳಿದ್ದಾರೆ.


ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್ ನಿಂದ ಅಥವಾ ಪಟಾಕಿಯ ಸಣ್ಣ ಕಿಡಿ ಹತ್ತಿ ಸ್ಫೋಟ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ. ಸ್ಫೋಟ ಸಂಭವಿಸಿದ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದವರಲ್ಲಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ.


ಇನ್ನು ಘಟನೆಯಿಂದ ತೀವ್ರ ಆಘಾತವಾಗಿದೆ ಎಂದಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು, ಕಾರ್ಖಾನೆಯಲ್ಲಿ ಉಂಟಾದ ಸ್ಫೋಟದಲ್ಲಿ ಹಲವರು ಜೀವಕಳೆದುಕೊಂಡಿದ್ದಾರೆ. ಗಾಯಗೊಂಡವರೂ ಇದ್ದಾರೆ. ಇದರಿಂದ ತುಂಬ ದುಃಖವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

SCROLL FOR NEXT