ದೇಶ

ಪೋಲಾವರಂ ಜಲ ವಿದ್ಯುತ್ ಯೋಜನೆ ರದ್ದುಗೊಳಿಸಿದ ಜಗನ್ ಸರ್ಕಾರ

Lingaraj Badiger

ಅಮರಾವತಿ: 3,216.11 ಕೋಟಿ ರೂಪಾಯಿ ಮೊತ್ತದ ಪೋಲಾವರಂ ಜಲ ವಿದ್ಯುತ್ ಯೋಜನೆಯನ್ನು ಆಂಧ್ರ ಪ್ರದೇಶ ಸರ್ಕಾರ ಬುಧವಾರ ರದ್ದುಗೊಳಿಸಿದ್ದು, ಈ ಯೋಜನೆಗೆ ಹೊಸದಾಗಿ ಟೆಂಡರ್ ಆಹ್ವಾನಿಸಿದೆ.

ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಟಿಡಿಪಿ ಆಡಳಿತದಲ್ಲಿ ನವಯುಗ ಇಂಜಿನಿಯರಿಂಗ್ ಕಂಪನಿಗೆ ನೀಡಿದ್ದ ಪೋಲಾವರಂ ಜಲ ವಿದ್ಯುತ್ ಯೋಜನೆಯ ಟೆಂಡರ್ ಅನ್ನು ರದ್ದುಗೊಳಿಸಿಲಾಗಿದೆ. ಅಲ್ಲದೆ ನವಯುಗ ಕಂಪನಿಗೆ ನೀಡಿದ್ದ ಮುಂಗಡ ಹಣವನ್ನು ಹಿಂಪಡೆಯಲು ಜಗನ್ ಸರ್ಕಾರ ನಿರ್ಧರಿಸಿದೆ.

ವೈಎಸ್ ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬಂದರ ನಂತರ ನವಯುಗ ಕಂಪನಿ ಕಳೆದುಕೊಳ್ಳುತ್ತಿರುವ ಎರಡನೇ ಅತಿ ದೊಡ್ಡ ಯೋಜನೆ ಇದಾಗಿದೆ.

ಕಳೆದ ಆಗಸ್ಟ್ ನಲ್ಲಿ ಜಗನ್ ಸರ್ಕಾರ ನವಯುಗ ಕಂಪನಿಗೆ ನೀಡಿದ್ದ 3 ಸಾವಿರ ಕೋಟಿ ರೂಪಾಯಿ ಮೌಲ್ಯದ ಪೋಲಾವರಂ ನೀರಾವರಿ ಯೋಜನೆಯನ್ನು ರದ್ದುಗೊಳಿಸಿತ್ತು. ಈ ಎರಡು ಯೋಜನೆಗಳನ್ನು ಹಿಂದಿನ ಟಿಡಿಪಿ ಸರ್ಕಾರ ನವಯುಗ ಕಂಪನಿಗೆ ನೀಡಿತ್ತು.

ಗೋದಾವರಿ ನದಿ ಅಡ್ಡವಾಗಿ ನಿರ್ಮಿಸುತ್ತಿರುವ ಪೋಲಾವರಂ ಯೋಜನೆಗೆ ಕೇಂದ್ರ ಸರ್ಕಾರ 58 ಸಾವಿರ ಕೋಟಿ ರೂ. ನೀಡುತ್ತಿದೆ.

SCROLL FOR NEXT