ದೇಶ

ಡಾ.ಮನಮೋಹನ್ ಸಿಂಗ್ ಹೇಳಿದ್ದನ್ನು ಸ್ವಲ್ಪ ಕೇಳಿ: ಮೋದಿ ಸರ್ಕಾರಕ್ಕೆ ಶಿವಸೇನೆ ಸಲಹೆ

Sumana Upadhyaya

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಸಮರ್ಪಕ ನೀತಿ-ನಿರ್ವಹಣೆಯಿಂದ ಭಾರತದ ಆರ್ಥಿಕ ಪರಿಸ್ಥಿತಿ  ಇಂದು ಹದಗೆಟ್ಟು ಹೋಗಿದೆ ಎಂದು ಹಣಕಾಸು ಸಚಿವರೂ ಆಗಿದ್ದ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರ ಮಾತನ್ನು ಬೆಂಬಲಿಸಿರುವ ಶಿವಸೇನೆ, ದೇಶದ ಹಿತಾಸಕ್ತಿಗೆ ಮನಮೋಹನ್ ಸಿಂಗ್ ಅವರ ಮಾತುಗಳನ್ನು ಸ್ವಲ್ಪ ಕೇಳಿ ಎಂದು ಸಲಹೆ ನೀಡಿದೆ.


ಮನಮೋಹನ್ ಸಿಂಗ್ ಅವರು ದೇಶದ ಖ್ಯಾತ ಅರ್ಥಶಾಸ್ತ್ರಜ್ಞರು, ಅವರು ಹೇಳುವ ಮಾತುಗಳಲ್ಲಿ ಅರ್ಥವಿರುತ್ತದೆ, ಅವರ ಮಾತುಗಳನ್ನು ಅಲಕ್ಷ್ಯ ಮಾಡಿ ಕ್ಷುಲ್ಲಕ ರಾಜಕಾರಣದಲ್ಲಿ ತೊಡಗಬೇಡಿ ಎಂದು ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದುಕೊಂಡಿದೆ.


ದೇಶದ ಆರ್ಥಿಕ ಸ್ಥಿತಿ ಕುಸಿದಿರುವುದು ತೀವ್ರ ಆತಂಕದ ವಿಷಯ, ಜೂನ್ ತಿಂಗಳ ಶೇಕಡಾ 5ರಷ್ಟು ಆರ್ಥಿಕ ಬೆಳವಣಿಗೆ ನೋಡಿದರೆ ದೀರ್ಘಕಾಲದ ಆರ್ಥಿಕ ಕುಸಿತದಿಂದ ಭಾರತ ನಲುಗಿ ಹೋಗುತ್ತಿದೆ ಎಂದು ಭಾಸವಾಗುತ್ತಿದೆ. ಕ್ಷಿಪ್ರ ವೇಗದಲ್ಲಿ ಭಾರತ ಆರ್ಥಿಕವಾಗಿ ಪುಟಿದೇಳುವ ಸಾಮರ್ಥ್ಯ ಹೊಂದಿದೆ. ಆದರೆ ಸರ್ಕಾರದ ಆರ್ಥಿಕ ಅಸಮರ್ಪಕ ನಿರ್ವಹಣೆಯಿಂದ ಈ ರೀತಿ ಕುಸಿತ ಕಂಡುಬಂದಿದೆ ಎಂದು ಮನಮೋಹನ್ ಸಿಂಗ್ ಕಳೆದ ವಾರ ಹೇಳಿಕೆ ನೀಡಿದ್ದರು. 


ಆದರೆ ಕೇಂದ್ರ ಸರ್ಕಾರ, ಮನಮೋಹನ್ ಸಿಂಗ್ ಅವರ ಹೇಳಿಕೆಗಳನ್ನು ಅಲ್ಲಗಳೆದಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ದೇಶದ ಆರ್ಥಿಕತೆ ವಿಶ್ವದಲ್ಲಿ 11ನೇ ಸ್ಥಾನದಲ್ಲಿತ್ತು. ಅದೀಗ 5ನೇ ಸ್ಥಾನಕ್ಕೇರಿದೆ ಎಂದು ಹೇಳಿದೆ.


ಶಿವಸೇನೆ ತನ್ನ ಮುಖವಾಣಿಯಲ್ಲಿ, ''ಸದ್ಯ ದೇಶದ ಆರ್ಥಿಕ ಸ್ಥಿತಿ ಮಂದಗತಿಯಲ್ಲಿದೆ. ಕಾಶ್ಮೀರ ವಿವಾದ ಮತ್ತು ಆರ್ಥಿಕ ಕುಸಿತ ಎರಡು ಭಿನ್ನ ವಿಷಯ. ಮನಮೋಹನ್ ಸಿಂಗ್ ನಂತಹ ತಿಳುವಳಿಕೆಯುಳ್ಳ ವ್ಯಕ್ತಿಗಳು ಆರ್ಥಿಕ ಕುಸಿತ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಆರ್ಥಿಕತೆಯನ್ನು ಮತ್ತೆ ಮೇಲಕ್ಕೆ ತರಲು ಅವರಂತಹ ತಜ್ಞರ ಅಭಿಪ್ರಾಯಗಳನ್ನು ಕೇಳಿ ಆ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು. ಮನಮೋಹನ್ ಸಿಂಗ್ ಅವರ ಸಲಹೆಗಳನ್ನು ಕೇಳುವುದರಲ್ಲಿ ದೇಶದ ಹಿತಾಸಕ್ತಿ ಅಡಗಿದೆ ಎಂದು ಹೇಳಿದೆ.


ಭಾರತದ ಹಣಕಾಸು ಮತ್ತು ಆರ್ಥಿಕತೆಯಲ್ಲಿ 35 ವರ್ಷಗಳಿಗೂ ಹೆಚ್ಚು ಕಾಲ ಮನಮೋಹನ್ ಸಿಂಗ್ ಅವರು ತೊಡಗಿದ್ದರಿಂದ ಅವರಿಗೆ ಈ ವಿಷಯದಲ್ಲಿ ಮಾತನಾಡುವ ಹಕ್ಕು ಇದೆ ಎಂದು ಕೂಡ ಶಿವಸೇನೆ ಹೇಳಿದೆ.

SCROLL FOR NEXT