ದೇಶ

ಮುಂಬೈ:ಭಾರಿ ಮಳೆಯಿಂದ ನಾಲ್ವರು ಸಾವು,ನೀರಿನಲ್ಲಿ ಕೊಚ್ಚಿ ಹೋದ ಬಾಲಕ

Nagaraja AB

ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ ನಾಲ್ವರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಬಾಲಕನೊಬ್ಬ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಂಗಳವಾರ ರಾತ್ರಿಯಿಂದಲೂ ಮುಂಬೈ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಡೆಬಿಡದೆ ಧಾರಾಕಾರ ಮಳೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 242 ಮಿಲಿ ಮೀಟರ್ ಮಳೆಯಾಗಿದೆ ಎಂದು  ಉಪನಗರ ಸಾಂತಾಕ್ರೂಜ್ ಹವಾಮಾನ ಕೇಂದ್ರ ತಿಳಿಸಿದೆ.

ಮಳೆಯಿಂದಾಗಿ ಕೇಂದ್ರ ಮುಂಬೈಯಲ್ಲಿನ  ಹಿಂದ್ಮಾತಾ ಪ್ರದೇಶದಲ್ಲಿ 60 ವರ್ಷದ ಅಶೋಕ್ ಮಾಯೇಕರ್ ಎಂಬ ವ್ಯಕ್ತಿ ಇಂದು ಮುಂಜಾನೆ ಮೃತಪಟ್ಟಿದ್ದು,  ಮರಣೋತ್ತರ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್   ಬಳಿಯ ಭಾರತ್‌ನಗರದಲ್ಲಿ ಮೊಹಮ್ಮದ್ ಶಾರುಖ್ ರಫೀಕ್ ಶೇಖ್ (24) ಹಾಗೂ ಇಬ್ಬರು ಸ್ನೇಹಿತರು ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ದೊಡ್ಡ ಮೋರಿಯೊಂದರಲ್ಲಿ  ಬಿದಿದ್ದಾರೆ. ರಕ್ಷಣಾ ತಂಡಗಳನ್ನು ಅವರನ್ನು ಹೊರಗೆ ತಂದರೂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮಿಥಿ ನದಿಯ ಪ್ರವಾಹದ ನೀರಿನಲ್ಲಿ ಮೂವರು ಸ್ನೇಹಿತರೊಂದಿಗೆ ಈಜಾಡುತ್ತಿದ್ದ ಬಾಲಕನೊಬ್ಬ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಆ ಬಾಲಕನ ಶೋಧ ಕಾರ್ಯ ಮುಂದುವರೆದಿದೆ. ಬುಧವಾರ ರಾತ್ರಿ ಬೃಹನ್ ಮಹಾನಗರ ಪಾಲಿಕೆಯ ಇಬ್ಬರು ನೌಕರರ ಮೃತದೇಹ ಸಿದ್ದಾರ್ಥ ನಗರದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವಾಹದಿಂದಾಗಿ ಮಿಥಿ ನದಿ ದಂಡೆ ಮೇಲೆ ವಾಸಿಸುತ್ತಿದ್ದ ಸುಮಾರು 1300 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನದಿ ಬಳಿ ನೌಕ, ಎನ್ ಡಿಆರ್ ಎಫ್ ಮತ್ತಿತರ ಏಜೆನ್ಸಿಗಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT