ದೇಶ

ದೇಶದ ಆರ್ಥಿಕ ಬಿಕ್ಕಟ್ಟು ಮರೆಮಾಚಲು ಚಂದ್ರಯಾನ-2 ಬಳಕೆ: ಮಮತಾ ಬ್ಯಾನರ್ಜಿ

Lingaraj Badiger

ಕೋಲ್ಕತಾ: ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಇದನ್ನು ಮರೆ ಮಾಚಲು ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯಲು ಚಂದ್ರಯಾನದ ನಾಟಕವಾಡಲಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರವನ್ನು  ಟೀಕಿಸಿದ್ದಾರೆ.

ಇಂದು ಬಂಗಾಳ ವಿಧಾನಸಭೆಯಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‍ಆರ್ ಸಿ) ವಿರುದ್ಧ ನಿರ್ಣಯ ಕೈಗೊಳ್ಳುವ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ನಮ್ಮ ಪಕ್ಷ ಹಾಗೂ ಸರ್ಕಾರ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಎನ್ ಆರ್ ಸಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದರು.

ಅಸ್ಸಾಂನಲ್ಲಿ ಮಾತ್ರ ಎನ್ಆರ್ ಸಿ ಜಾರಿಗೊಳಿಸಲಾಗಿದೆ. ದೇಶದ ಇತರೆ ಯಾವುದೇ ರಾಜ್ಯಗಳಲ್ಲೂ ಎನ್ ಆರ್ ಸಿ ಜಾರಿಗೊಳಿಸಿಲ್ಲ. ದೇಶದಲ್ಲಿ ಬಿಜೆಪಿ ವಿರುದ್ಧ ಯಾರೂ ಮಾತನಾಡುತ್ತಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದೆರು.

ಇದೇ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಮತಾ, ಚಂದ್ರಯಾನ-2 ಇದೇ ಮೊದಲೇ? ಬಿಜೆಪಿಯವರು ಅಧಿಕಾರಕ್ಕೆ ಬರುವ ಮೊದಲು ನಾವು ಇಂತಹ ಪ್ರಯತ್ನ ಮಾಡಿರಲಿಲ್ಲವೇ, ಇವರೇ ಮಾಡಿದ್ದಾರೆ ಎನ್ನುವ ರೀತಿ ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರ ದೇಶದ ಆರ್ಥಿಕತೆ ಬಗ್ಗೆ ಗಮನಹರಿಸುವ ಬದಲು ಸೇಡಿನ ರಾಜಕೀಯ ಮಾಡುತ್ತಿದೆ. ಸರ್ಕಾರ ಇತ್ತೀಚಿಗೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ದೇಶದ ಜಿಡಿಪಿ ಶೇ.5ಕ್ಕೆ ಕುಸಿದಿದೆ. ಇದು ಕಳೆದ ಆರು ವರ್ಷಗಳಲ್ಲೇ ಅತ್ಯಂತ ಕಡಿಮೆ ಎಂದರು.

ಈವೆರೆಗೆ ವಿಶ್ವದ ಮೂರು ದೇಶಗಳು ಮಾತ್ರ ಚಂದ್ರನ ಮೇಲೆ ನೌಕೆ ಇಳಿಸಿವೆ. ಇಂದು ಚಂದ್ರಯಾನ-2 ನೌಕೆ ಯಶಸ್ವಿಯಾಗಿ ಚಂದ್ರನಂಗಳಕ್ಕೆ ಇಳಿದರೆ ರಷ್ಯಾ, ಅಮೆರಿಕ ಹಾಗೂ ಚೀನಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ವಿಶೇಷವೆಂದರೆ ಯಾವ ದೇಶವೂ ಕಾಲಿಡದ ಹಾಗೂ ಬಿಸಿಲು ಕಾಣದ ಚಂದ್ರನ ದಕ್ಷಿಣ ದ್ರುವಕ್ಕೆ ಚಂದ್ರಯಾನ-2 ನೌಕೆ ಕಾಲಿಡಲಿದೆ.

SCROLL FOR NEXT