ದೇಶ

ಆರ್ಥಿಕ ಹಿಂಜರಿತ ತಾತ್ಕಾಲಿಕ, ಶೀಘ್ರದಲ್ಲೇ ಸುಧಾರಣೆ: ಜಾವಡೇಕರ್

Lingaraj Badiger

ನವದೆಹಲಿ: ದೇಶದ ಆರ್ಥಿಕ ಹಿಂಜರಿತ ತಾತ್ಕಾಲಿಕವಾಗಿದ್ದು, ಆರ್ಥಿಕತೆಯ ಮೂಲ ಸದೃಢವಾಗಿದೆ ಎಂದಿರುವ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್, ಮುಂದಿನ ದಿನಗಳಲ್ಲಿ ಹೂಡಿಕೆ ಹೆಚ್ಚಳವಾಗಲಿದ್ದು, ದೇಶೀಯ ಬೇಡಿಕೆ ಕೂಡ ಏರಿಕೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಡಳಿತದ ಮೊದಲ 100 ದಿನಗಳಲ್ಲಿ ಸರ್ಕಾರ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಐತಿಹಾಸಿಕ ಹಾಗೂ ಮೈಲುಗಲ್ಲಿನ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದರು.

ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವಾಯತ್ತೆ ನೀಡಿದ್ದ ಸಂವಿಧಾನದ 370ನೇ ವಿಧಿ ಹಾಗೂ 35ಎ ಪರಿಚ್ಛೇದವನ್ನು ರದ್ದುಗೊಳಿಸಿರುವುದು ಸರ್ಕಾರದ ಮಹತ್ವದ ನಿರ್ಧಾರವಾಗಿದೆ. ಇದರಿಂದ ಜಮ್ಮು ಕಾಶ್ಮೀರ ಕೂಡ ಮುಖ್ಯವಾಹಿನಿಗೆ ಬರುವಂತಾಗಿದೆ ಎಂದರು.

ಯುಎಪಿಎ ಕಾಯ್ದೆ ತಿದ್ದುಪಡಿ, ಪೋಕ್ಸೋ ಕಾಯ್ದೆಗೆ ಮಹತ್ವದ ತಿದ್ದುಪಡಿ, 5 ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪುವ ನಿಟ್ಟಿನಲ್ಲಿ ಅನೇಕ ನಿರ್ಧಾರಗಳು, ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನ, 100 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಮೂಲಭೂತ ಸೌಕರ್ಯಗಳ ಯೋಜನೆಗಳಂತಹ ದಿಟ್ಟ ಹಾಗೂ ನಿರ್ಧಾರಿತ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ ಎಂದರು.

ಕಾರ್ಪೊರೇಟ್ ಕಾಯ್ದೆಗಳನ್ನು ಪಾರದರ್ಶಕಗೊಳಿಸಲಾಗಿದೆ. ಜಿಎಸ್ ಟಿ ಹಾಗೂ ಆದಾಯ ತೆರಿಗೆ ಕಾಯ್ದೆಗಳನ್ನು ಜಾರಿಗೆ ತಂದು ಮಧ್ಯವರ್ತಿಗಳ ಹಾವಳಿಗೆ ತಡೆ ಹಾಕಲಾಗಿದೆ ಎಂದರು.

ಇತ್ತೀಚೆಗೆ ನಡೆದ ಸಂಸತ್ ಅಧಿವೇಶನದಲ್ಲಿ 35 ಪ್ರಮುಖ ಮಸೂದೆಗಳನ್ನು ಜಾರಿಗೊಳಿಸಿರುವುದು ಉತ್ತಮ ಆಡಳಿತದ ಕುರಿತು ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ಕಳೆದ 100 ದಿನಗಳಲ್ಲಿ 1100 ಅನುಪಯೋಗಿ ಕಾನೂನುಗಳನ್ನು ರದ್ದುಗೊಳಿಸಲಾಗಿದೆ ಎಂದರು.

ಹಿಂದಿನ ಸರ್ಕಾರ ಮತ ಬ್ಯಾಂಕ್ ಗಾಗಿ ಸುಪ್ರೀಂಕೋರ್ಟ್ ಆದೇಶವಿದ್ದರೂ ತ್ರಿವಳಿ ತಲಾಖ್ ಮಸೂದೆಯನ್ನು ಜಾರಿಗೆ ತರಲಿಲ್ಲ. ಆದರೆ, ತಮ್ಮ ಸರ್ಕಾರ ಅದನ್ನು ಜಾರಿಗೆ ತರುವ ದಿಟ್ಟ ನಿಲುವು ತೋರಿತು ಎಂದರು.

SCROLL FOR NEXT