ದೇಶ

ಆರ್ಟಿಕಲ್ 371 ಕುರಿತು ಈಶಾನ್ಯ ರಾಜ್ಯಗಳಿಗೆ ಅಮಿತ್ ಶಾ ಹೇಳಿದ್ದೇನು ಗೊತ್ತೇ? 

Srinivas Rao BV

ಆರ್ಟಿಕಲ್ 370 ರದ್ದುಗೊಳಿಸಿದಾಗಿನಿಂದ ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಿರುವ ಆರ್ಟಿಕಲ್ 371 ನ್ನೂ ರದ್ದುಗೊಳಿಸಲಿದೆ ಎಂಬ ಆತಂಕ ಎದುರಾಗಿತ್ತು. ಆದರೆ ಈ ಬಗ್ಗೆ ಸ್ವತಃ ಗೃಹ ಸಚಿವ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ. 

ಆರ್ಟಿಕಲ್ 370 ತಾತ್ಕಾಲಿಕವಾದದ್ದು ಎಂಬುದು ಸ್ಪಷ್ಟವಾಗಿತ್ತು, ಆದರೆ ಆರ್ಟಿಕಲ್ 371 ಈಶಾನ್ಯ ರಾಜ್ಯಗಳಲ್ಲಿ ವಿಶೇಷ ನಿಬಂಧನೆಗಳಿಗೆ ಸಂಬಂಧಪಟ್ಟಿದ್ದಾಗಿದೆ. ಎರಡಕ್ಕೂ ವ್ಯತ್ಯಾಸವಿದೆ ಎಂದು ಈಶಾನ್ಯ ಪರಿಷತ್ ನ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಅಮಿತ್ ಶಾ ಹೇಳಿದ್ದಾರೆ. 

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370 ರದ್ದುಗೊಳಿಸಿದ ಬೆನ್ನಲ್ಲೇ ಆರ್ಟಿಕಲ್ 371 ನ್ನೂ ರದ್ದುಗೊಳಿಸುತ್ತಾರೆಂದು ತಪ್ಪು ಮಾಹಿತಿ ನೀಡಿ, ಈಶಾನ್ಯ ರಾಜ್ಯಗಳ ಜನರನ್ನು ದಾರಿ ತಪ್ಪಿಸುವ ಯತ್ನಗಳು ನಡೆದಿವೆ. ಈ ಬಗ್ಗೆ ಸಂಸತ್ ನಲ್ಲೂ ಸ್ಪಷ್ಟನೆ ನೀಡಿದ್ದೇನೆ ಈಗಲೂ ಈಶಾನ್ಯ ರಾಜ್ಯಗಳ 8 ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಹೇಳುತ್ತಿದ್ದೇನೆ, ಕೇಂದ್ರ ಸರ್ಕಾರ ಆರ್ಟಿಕಲ್ 371 ನ್ನು ಮುಟ್ಟುವುದಿಲ್ಲ" ಎಂದು ಅಮಿತ್ ಶಾ ತಿಳಿಸಿದ್ದಾರೆ. 

ಇದೇ ವೇಳೆ ಎನ್ ಆರ್ ಸಿ ಬಗ್ಗೆಯೂ ಮಾತನಾಡಿರುವ ಅಮಿತ್ ಶಾ, ಅಸ್ಸಾಂ ನಲ್ಲಿ ಎನ್ ಆರ್ ಸಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಯಾವುದೇ ಅಕ್ರಮ ವಲಸಿಗನಿಗೂ ದೇಶದಲ್ಲಿರುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. 

SCROLL FOR NEXT