ದೇಶ

ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ದುರಂತ, ನದಿಗೆ ಬಿದ್ದು ಸೈನಿಕನ ಸಾವು!

Srinivasamurthy VN

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ನಿಗ್ರಹ ಕಾರ್ಯಾಚರಣೆ ವೇಳೆ ದುರಂತ ಸಂಭವಿಸಿದ್ದು, ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಯೋಧನೋರ್ವ ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಗಂದೇರ್ ಬಲ್ ನ ವುಸಾನ್ ಪ್ರದೇಶದಲ್ಲಿನ ಯೋಧ ನದಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಮೃತ ಯೋಧನನ್ನು ದಫೇದಾರ್ ಅಸ್ಲಾಂ ಖಾನ್ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ ಕಳೆದ ಎರಡು ದಿನಗಳಿಂದ ಇಲ್ಲಿ ಉಗ್ರ ಚಟುವಟಿಕೆಗಳು ಕಂಡು ಬಂದಿದ್ದವು. ಹೀಗಾಗಿ ಕೂಡಲೇ ಸೇನೆ ಶೋಧ ಕಾರ್ಯಾಚರಣೆ ನಡೆಸಿತ್ತು. ಅದರಂತೆ ನಿನ್ನೆ ಈ ಪ್ರದೇಶದಲ್ಲಿಯೂ ಸೈನಿಕರು ಶೋಧ ನಡೆಸುತ್ತಿದ್ದರು. 

ಈ ವೇಳೆ ಅಸ್ಲಾಂ ಖಾನ್ ಇಲ್ಲಿನ ನದಿ ದಡದಲ್ಲಿ ಕಾರ್ಯಾಚರಣೆಯಲ್ಲಿ ಮಗ್ನರಾಗಿದ್ದಾಗ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಕೂಡಲೇ ಸೇನೆ ರಕ್ಷಣಾ ಕಾರ್ಯಾಚರಣೆ ನಡೆಸಿತ್ತಾದರೂ, ನೀರಿನ ಹರಿವಿನ ವೇಗ ಹೆಚ್ಚಿದ್ದರಿಂದ ಕ್ಷಣ ಮಾತ್ರದಲ್ಲಿ ಯೋಧ ಕೊಚ್ಚಿಕೊಂಡು ಹೋಗಿದ್ದಾರೆ. ಸತತ ಕಾರ್ಯಾಚರಣೆ ಬಳಿಕ ಅವರ ದೇಹವನ್ನು ಪತ್ತೆ ಹಚ್ಚಲಾಯಿತಾದರೂ ಅಷ್ಟು ಹೊತ್ತಿಗಾಗಲೇ ಯೋಧ ಅಸ್ಲಾಂ ಖಾನ್ ಮೃತರಾಗಿದ್ದರು.

ಶ್ರೀನಗರದ ಚಿನಾರ್ ಕಾರ್ಪೋರೇಷನ್ ಹೆಡ್ ಕ್ವಾರ್ಟರ್ಸ್ ನಲ್ಲಿ ಮೃತ ಯೋಧನ ಪಾರ್ಥೀವ ಶರೀರಕ್ಕೆ ಸೇನೆ ಅಂತಿಮ ಗೌರವ ಸಲ್ಲಿಕೆ ಮಾಡಿದೆ. ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದೆ ಎನ್ನಲಾಗಿದೆ.

SCROLL FOR NEXT