ದೇಶ

ವಿಶ್ವಸಂಸ್ಥೆಗೆ ನೀಡಿದ ದೂರಿನಲ್ಲಿ ರಾಹುಲ್, ಒಮರ್ ಹೇಳಿಕೆ ಪ್ರಸ್ತಾಪಿಸಿದ ಪಾಕ್

Lingaraj Badiger

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ವಿಶ್ವಸಂಸ್ಥೆಯ ಮಾನವಹಕ್ಕು ಮಂಡಳಿಗೆ ಸಲ್ಲಿಸಿದ ದೂರಿನ ಪ್ರತಿ ಸೋರಿಕೆಯಾಗಿದ್ದು, ದೂರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ನೀಡಿದ ಹೇಳಿಕೆಗಳು ಪ್ರಸ್ತಾಪಿಸಲಾಗಿದೆ.

ಕಳೆದ 20 ದಿನಗಳಿಂದ ಜಮ್ಮು-ಕಾಶ್ಮೀರ ಜನತೆಯ ಸ್ವಾತಂತ್ರ್ಯ ಹಾಗೂ ನಾಗರೀಕ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ. ವಿರೋಧ ಪಕ್ಷಗಳ ನಾಯಕರು ಹಾಗೂ ಮಾಧ್ಯಮ ಕಣಿವೆ ರಾಜ್ಯಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ, ಸರ್ಕಾರದ ಕಠಿಣ ಹಾಗೂ ವಿವೇಚನಾರಹಿತ ನಿರ್ಧಾರರಿಂದಾಗಿ ಜನರು ಕಷ್ಟ ಅನುಭವಿಸುತ್ತಿರುವುದು ಅರಿವಿಗೆ ಬಂದಿದೆ ಎಂದು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯನ್ನು ಪಾಕಿಸ್ತಾನ ತನ್ನ ದೂರಿನಲ್ಲಿ ಉಲ್ಲೇಖಿಸಿದೆ.

ಇನ್ನು ಒಮರ್ ಅಬ್ದುಲ್ಲಾ ಅವರ ಹೇಳಿಕೆಯನ್ನೂ ಪ್ರಸ್ತಾಪಿಸಿರುವ ಪಾಕ್, ಮೋದಿ ಸರ್ಕಾರದ ಏಕಪಕ್ಷೀಯ ಹಾಗೂ ಆಘಾತಕಾರಿ ನಿರ್ಧಾರದಿಂದಾಗಿ ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗಿದೆ. ಇದು ಕಾಶ್ಮೀರ ಜನತೆ ವಿರುದ್ಧದ ಆಕ್ರಮಣ. ಕೇಂದ್ರದ ನಿರ್ಧಾರ ಏಕಪಕ್ಷೀಯ, ಅಕ್ರಮ ಹಾಗೂ ಅಸಂವಿಧಾನಿಕ. ಮುಂದಿನ ದಿನಗಳಲ್ಲಿ ಸುದೀರ್ಘ ಹಾಗೂ ಕಠಿಣ ಸಮರ ನಿಮಗಾಗಿ ಕಾದಿದೆ ಎಂದು ಮಾಜಿ ಸಿಎಂ ಹೇಳಿದ್ದರು.

ಆಗಸ್ಟ್‌ 28ರಂದು ಈ ಕುರಿತು ಸರಣಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಕಣಿವೆ ರಾಜ್ಯದಲ್ಲಿ ಹಿಂಸಾಚಾರ ಭುಗಿಲೇಳಲು ಪಾಕಿಸ್ತಾನವೇ ನೇರ ಕಾರಣ ಎಂದು ಆರೋಪಿಸಿದ್ದರು.  ಅಲ್ಲದೆ, ಕಾಶ್ಮೀರ ಭಾರತದ ಆಂತರಿಕ ವಿಚಾರ, ಇದರಲ್ಲಿ ಪಾಕಿಸ್ತಾನ ಮೂಗು ತೂರಿಸುವುದು ಬೇಡ ಎಂದಿದ್ದರು.

SCROLL FOR NEXT