ದೇಶ

ರಾಜಕೀಯವಾಗಿ ನಿಮ್ಮೊಂದಿಗೆ: ಡಿಕೆ ಸುರೇಶ್ ಜೊತೆ ಸೋನಿಯಾ ಚರ್ಚೆ; ನೆರವಿನ ಅಭಯ

Shilpa D

ಬೆಂಗಳೂರು: ಜಾರಿ ನಿರ್ದೇಶನಾಲಯ(ಇ.ಡಿ.)ದ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್‌ನ ಟ್ರಬಲ್ ಶೂಟರ್‌ ಡಿ.ಕೆ.ಶಿವಕುಮಾರ್‌ ಸೋದರ, ಸಂಸದ ಡಿ.ಕೆ. ಸುರೇಶ್‌ ಅವರನ್ನು, ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ತಮ್ಮ ನಿವಾಸಕ್ಕೆ ಆಹ್ವಾನಿಸಿ ಸುಮಾರು ಅರ್ಧ ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರು ಡಿ.ಕೆ.ಶಿವಕುಮಾರ್‌ ಹೋರಾಟಕ್ಕೆ ಪಕ್ಷದ ವತಿಯಿಂದ ಎಲ್ಲ ರೀತಿಯ ನೆರವು ನೀಡುವ ಅಭಯ ನೀಡಿದ್ದಾರೆ ಎನ್ನಲಾಗಿದೆ.

ಭೇಟಿ ಬಳಿಕ ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ ಡಿ.ಕೆ. ಸುರೇಶ್‌, ಸೋನಿಯಾ ಗಾಂಧಿ ಅವರು ಡಿ.ಕೆ.ಶಿವಕುಮಾರ್‌ ಅವರ ಯೋಗಕ್ಷೇಮ ವಿಚಾರಿಸಿ ನೈತಿಕ ಸ್ಥೈರ್ಯ ತುಂಬಿದ್ದಾರೆ ಎಂದು ತಿಳಿಸಿದರು.

ಡಿ.ಕೆ.ಶಿವಕುಮಾರ್‌ ಜತೆ ನಾವೆಲ್ಲರೂ ಇದ್ದೇವೆ. ಪಕ್ಷ ಅವರ ಜತೆಗಿದೆ. ಯಾವುದೇ ಕಾರಣಕ್ಕೂ ಅವರು ಧೈರ್ಯ ಕಳೆದುಕೊಳ್ಳುವುದು ಬೇಡ. ಅದು ಕಾನೂನು ಹೋರಾಟವೇ ಇರಲಿ, ರಾಜಕೀಯ ಹೋರಾಟವೇ ಇರಲಿ. ಅವರೊಂದಿಗೆ ನಾವೆಲ್ಲರೂ ಇದ್ದೇವೆ ಎಂದು ಸುರೇಶ್‌ಗೆ ಸೋನಿಯಾ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ತಮ್ಮ ಪ್ರಬಲ ವಿರೋಧಿಗಳನ್ನು ಸದೆಬಡಿಯಲು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿದೆ. ಕಾಲವೇ ಇದೆಲ್ಲದಕ್ಕೂ ಉತ್ತರ ಹೇಳಲಿದೆ. ಶಿವಕುಮಾರ್‌ ಎಲ್ಲವನ್ನೂ ಗೆದ್ದು ಬರಲಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದು ಸೋನಿಯಾ ಗಾಂಧಿ ಹೇಳಿರುವುದಾಗಿ ಡಿ.ಕೆ. ಸುರೇಶ್‌ ಮಾಹಿತಿ ನೀಡಿದರು.

ಸೋನಿಯಾ ಗಾಂಧಿ ಅವರು ಇತ್ತೀಚೆಗಷ್ಟೇ ಡಿ.ಕೆ.ಸುರೇಶ್‌ ಅವರಿಗೆ ಕರೆ ಮಾಡಿ ಸುಮಾರು ಅರ್ಧ ಗಂಟೆ ಮಾತನಾಡಿದ್ದರು. ಡಿ.ಕೆ.ಶಿವಕುಮಾರ್‌ ಅವರ ಆರೋಗ್ಯ, ಮಾನಸಿಕ ಸ್ಥಿತಿ ಕುರಿತು ವಿಚಾರಿಸಿದ್ದರು. ಡಿ.ಕೆ.ಶಿವಕುಮಾರ್‌ ಅವರು ಯಾವುದಕ್ಕೂ ಆತಂಕ ಪಡುವ ಅಗತ್ಯವಿಲ್ಲ, ಪಕ್ಷ ಅವರ ಜತೆಗೆ ನಿಲ್ಲಲಿದೆ ಎಂದು ಭರವಸೆ ನೀಡಿದ್ದರು.

SCROLL FOR NEXT