ದೇಶ

ಫಾರೂಕ್ ಅಬ್ದುಲ್ಲಾ ಚೆನ್ನೈ ಆಗಮನಕ್ಕೆ ಅನುಮತಿ ಕೋರಿ ವೈಕೊ 'ಸುಪ್ರೀಂ'ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ  

Sumana Upadhyaya

ಚೆನ್ನೈ: ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಚೆನ್ನೈಗೆ ಆಗಮಿಸಲು ಅನುಮತಿ ನೀಡಬೇಕೆಂದು ಕೋರಿ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೊ ಬುಧವಾರ ಸುಪ್ರೀಂ ಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.


ರಾಜ್ಯಸಭಾ ಸದಸ್ಯರಾಗಿರುವ ವೈಕೊ, ಚೆನ್ನೈಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸಲು ಫಾರೂಕ್ ಅಬ್ದುಲ್ಲಾ ಅವರಿಗೆ ಅವಕಾಶ ನೀಡಬೇಕೆಂದು ಅರ್ಜಿಯಲ್ಲಿ ನ್ಯಾಯಾಲಯವನ್ನು ಕೋರಿದ್ದಾರೆ.


ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿ ಎನ್ ಅಣ್ಣಾದೊರೈ ಅವರ ಜನ್ಮದಿನಾಚರಣೆ ಸಂದರ್ಭದಲ್ಲಿ ಚೆನ್ನೈಯಲ್ಲಿ ಹಲವು ವರ್ಷಗಳಿಂದ ವೈಕೊ ಸಮ್ಮೇಳನವನ್ನು ಆಯೋಜಿಸುತ್ತಾ ಬಂದಿದ್ದಾರೆ. ಈ ಸಮ್ಮೇಳನ ಇದೇ 15ರಂದು ನಡೆಯಲಿದೆ.


ಈ ಬಾರಿ ಸಮ್ಮೇಳನಕ್ಕೆ ಅಬ್ದುಲ್ಲಾ ಅವರನ್ನು ಆಹ್ವಾನಿಸಿದ್ದರು, ಅದಕ್ಕೆ ಅವರು ಆಗಮಿಸಲು ಒಪ್ಪಿದ್ದರು ಕೂಡ. ಆದರೆ ಕಳೆದ ಆಗಸ್ಟ್ 5ರಂದು ಅಬ್ದುಲ್ಲಾ ಅವರನ್ನು ಶ್ರೀನಗರದಲ್ಲಿ ಗೃಹ ಬಂಧನದಲ್ಲಿರಿಸಿದ ನಂತರ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. 


ವಾಕ್ ಸ್ವಾತಂತ್ರ್ಯ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಭಾಗವಹಿಸುವ ಆಸಕ್ತಿಗೆ ಉತ್ತೇಜನ ನೀಡಲು ಚೆನ್ನೈಗೆ ಆಗಮಿಸಲು ಅಬ್ದುಲ್ಲಾ ಅವರಿಗೆ ಅವಕಾಶ ನೀಡಬೇಕೆಂದು ವೈಕೊ ಜಮ್ಮು-ಕಾಶ್ಮೀರ ಅಧಿಕಾರಿಗಳಿಗೆ ಈಗಾಗಲೇ ಪತ್ರ ಬರೆದಿದ್ದರು, ಆದರೆ ಪ್ರತಿಕ್ರಿಯೆ ಸಿಗಲಿಲ್ಲ.


ಶಾಂತಿಯುತ ಪ್ರಜಾಸತ್ತಾತ್ಮಕ ಸಮ್ಮೇಳನಕ್ಕೆ ಫಾರೂಕ್ ಅಬ್ದುಲ್ಲಾ ಅವರಿಗೆ ಭಾಗವಹಿಸಲು ಅವಕಾಶ ನಿರಾಕರಿಸಿದರೆ ಅದು ಅಕ್ರಮ, ಅನಿಯಂತ್ರಣ ಮತ್ತು ಸಂವಿಧಾನ ವಿಧಿ 21,22 ಮತ್ತು 19(1)(ಎ)ನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ವೈಕೊ ಅರ್ಜಿಯಲ್ಲಿ ವಿವರಿಸಿದ್ದಾರೆ.


ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವಾದ ಸಂವಿಧಾನ ವಿಧಿ 370ನ್ನು ರದ್ದುಪಡಿಸಿದ ನಂತರ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದ ಹಲವು ನಾಯಕರನ್ನು ಗೃಹಬಂಧನದಲ್ಲಿರಿಸಿದೆ.

SCROLL FOR NEXT