ಲಕ್ನೋ: ಬಿಜೆಪಿ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಎಂ ಎಂ ಜೋಷಿ ಹಾಗೂ ಉಮಾ ಭಾರತಿ ಭಾಗಿಯಾಗಿರುವ 1992ರ ಬಾಬ್ರಿ ಮಸೀದಿ ದ್ವಂಸ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಧೀಶರ ಅವಧಿಯನ್ನು ಸುಪ್ರೀಂಕೋರ್ಟ್ ಸೂಚನೆಯಂತೆ ವಿಸ್ತರಿಸಿರುವುದಾಗಿ ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿದೆ.
ನ್ಯಾಯಮೂರ್ತಿ ಆರ್.ಎಫ್. ನಾರಿಮನ್ ಹಾಗೂ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಉತ್ತರ ಪ್ರದೇಶ ಸರ್ಕಾರದ ಮುಖ್ಯಕಾರ್ಯದರ್ಶಿ ಈ ಸಂಬಂಧ ಪ್ರಮಾಣಪತ್ರ ಹಾಗೂ ಸರ್ಕಾರಿ ಆದೇಶದ ಪ್ರತಿಯನ್ನು ಸಲ್ಲಿಸಿದ್ದಾರೆ.
ಉತ್ತರ ಪ್ರದೇಶದ ಪರವಾಗಿ ಹಾಜರಾದ ಹಿರಿಯ ವಕೀಲ ಐಶರ್ಯಾ ಭಟಿ, ದೇಶದ ಸರ್ವೋಚ್ಛ ನಾಯಾಲಯದ ನಿರ್ದೇಶನವನ್ನು ಪರಿಗಣಿಸಿ ಆಯೋಧ್ಯ ಧ್ವಂಸ ಪ್ರಕರಣದ ತೀರ್ಪು ನೀಡುವವರೆಗೆ ವಿಶೇಷ ನ್ಯಾಯಾಧೀಶರ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದರು. ಅಗತ್ಯವಾದ ಕ್ರಮ ಕೈಗೊಂಡಿರುವುದಕ್ಕೆ ನಮಗೆ ತೃಪ್ತಿಯಾಗಿದೆ ಎಂದು ಹೇಳಿದ ನ್ಯಾಯಪೀಠ ವಿಷಯವನ್ನು ಇತ್ಯರ್ಥಪಡಿಸಿತು.