ದೇಶ

ಪಿಎನ್'ಬಿ ಹಗರಣ: ನೀರವ್ ಮೋದಿ ಸಹೋದರನಿಗೆ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ

Manjula VN

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್'ಗೆ ಕೋಟ್ಯಾಂತರ ರುಪಾಯಿಗಳನ್ನು ವಂಚಿಸಿ ವಿದೇಶಕ್ಕೆ ಹಾರಿರುವ ಕಳಂಕಿತ ವಜ್ರಗಳ ವ್ಯಾಪಾರಿ ನೀರವ್ ಮೋದಿ ಸಹೋದರ ನೆಹಾಲ್ ಮೋದಿಗೆ ಇಂಟರ್ ಪೋಲ್ ಶುಕ್ರವಾರ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. 

ಜಾರಿ ನಿರ್ದೇಶನಾಲಯದ ಮನಮಿ ಮೇರೆಗೆ ನೆಹಾಲ್ ಅವರಿಗೆ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ ಎಂದು ಹೇಳಲಾಗುತ್ತಿದೆ. 

ನೆಹಾಲ್ ಪ್ರಸ್ತುತ ಅಮೆರಿಕಾದಲ್ಲಿ ಅಡಗಿ ಕುಳಿತಿದ್ದಾನೆಂದು ಹೇಳಲಾಗುತ್ತಿದ್ದು, ಈತ ಬೆಲ್ಜಿಯಂ ಪ್ರಜೆಯಾಗಿದ್ದಾನೆ. ಈತನ ವಿರುದ್ಧ ಅಕ್ರಮವಾಗಿ ಹಣ ವ್ಯವಹಾರ ನಡೆಸಿರುವ ಆರೋಪವಿದೆ. 

ಬ್ಯಾಂಕ್ ಹಣವನ್ನು ಅಕ್ರಮವಾಗಿ ಬಳಸಿಕೊಳ್ಳಲು ನೀರವ್ ಮೋದಿಗೆ ನೆಹಾಲ್ ನೆರವಾಗಿದ್ದ. ನೆಹಾಲ್'ಗೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಇಂಟರ್ ಪೋಲ್'ಗೆ ಪ್ರಸಕ್ತ ಸಾಲಿನ ಆರಂಭದಲ್ಲಿ ಜಾರಿ ನಿರ್ದೇಶನಾಲಯ ಮನವಿ ಮಾಡಿಕೊಂಡಿತ್ತು. 

ಗೊತ್ತಿದ್ದರೂ, ಉದ್ದೇಶಪೂರ್ವಕವಾಗಿಯೇ ಅಕ್ರಮ ಹಣ ವ್ಯವಹಾರದಲ್ಲಿ ಹಾಗೂ ಸಾಕ್ಷ್ಯಗಳನ್ನು ನಾಶ ಮಾಡಲು ನೆಹಾಲ್ ನೆರವು ನೀಡಿದ್ದ ಎಂಬುದನ್ನು ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಿದೆ. 

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ರೂ.13 ಸಾವಿರ ಕೋಟಿ ವಂಚಿಸಿದ ಆರೋಪ ನೀರವ್ ಮೋದಿ ಮೇಲಿದೆ. ನೀರವ್ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜ್ಯೂವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್ಐಆರ್ ದಾಖಲಿಸಿದೆ. ಪ್ರಕರಣ ಸಂಬಂಧ ಈಗಾಗಲೇ ಮುಂಬೈ ಸೇರಿದಂತೆ ವಿದೇಶದಲ್ಲಿರುವ ನೀರವ್ ಮೋದಿ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿದೆ. 

ಈ ಹಿಂದೆ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿನಿದ 286 ಕೋಟಿ ಹಣವನ್ನು ತಮ್ಮ ವಿದೇಶಿ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು. ಈ ಮೂಲಕ ಹಣವನ್ನು ತನ್ನ ಸ್ವಿಜ್ ಅಕೌಂಟ್'ಗೆ ರವಾನೆ ಮಾಡಲಾಗಿತ್ತು. ಇದನ್ನು ಪತ್ತೆ ಹಚ್ಚಿದ್ದ ಇಡಿ ಅಧಿಕಾರಿಗಳು ನೀರವ್ ಮೋದಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಸ್ವಿಜರ್ಲೆಂಡ್ ಸರ್ಕಾರಕ್ಕೆ ಒತ್ತಾಯಿಸಿದ್ದರು. ಬಳಿಕ ಅಧಿಕಾರಿಗಳ ಒತ್ತಡಕ್ಕೆ ಮಣಿದ ಸ್ವಿಜರ್ಲೆಂಡ್ ನೀರವ್ ಅವರ ಅಕೌಂಟ್ ಗಳನ್ನು ಸ್ಥಗಿತಗೊಳಿಸಲು ಮುಂದಾಗಿತ್ತು. 

ನ್ಯಾಯಾಲಯದಿಂದ ಆರ್ಥಿಕ ಅಪರಾಧಿ ಎಂದು ಘೋಷಿಸಲಾಗಿರುವ ನೀರವ್ ಮೋದಿ ಪ್ರಸ್ತುತ ಲಂಡನ್ ನಲ್ಲಿ ನೆಲೆಸಿದ್ದಾರೆಂದು ಹೇಳಲಾಗುತ್ತಿದೆ. ನೀರವ್ ಮೋದಿ ಲಂಡನ್ ನಲ್ಲಿ ಇರುವುದನ್ನು ಪತ್ತೆ ಹಚ್ಚಿರುವ ಇಡಿ ಭಾರತಕ್ಕೆ ಹಸ್ತಾಂತರಿಸುವಂತೆ ಲಂಡನ್ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ನಿಟ್ಟಿನಲ್ಲಿ ಕಳೆದ ಮಾರ್ಚ್ ತಿಂಗಳಿನಲ್ಲಿ ನೀರವ್ ರನ್ನು ಬಂಧಿಸಿದ್ದ ಲಂಡನ್ ಸರ್ಕಾರ ಜೈಲಿನಲ್ಲಿಟ್ಟಿದ್ದು. ಈ ವರೆಗೂ ನೀರವ್ ಜಾಮೀನಿಗಾಗಿ 4 ಬಾರಿ ಮನವಿ ಮಾಡಿಕೊಂಡಿದ್ದರು, ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. 

SCROLL FOR NEXT