ದೇಶ

ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಪ್ರಶ್ನಿಸಿ ಮತ್ತೊಂದು ಆರ್ಜಿ, ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೊಟೀಸ್

Srinivasamurthy VN

ನವದೆಹಲಿ: ತ್ರಿವಳಿ ತಲಾಖ್ ಆಚರಣೆಯನ್ನು ಅಪರಾಧ ಎಂದು ಪರಿಗಣಿಸುವ ಕೇಂದ್ರ ಸರ್ಕಾರದ ಹೊಸ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಹೊಸದಾಗಿ ಸಲ್ಲಿಕೆಯಾಗಿರುವ ಆರ್ಜಿ ಸಂಬಂಧ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

ನ್ಯಾಯಮೂರ್ತಿ ಎನ್ ವಿ ರಮಣ, ಇಂದಿರಾ ಬ್ಯಾನರ್ಜಿ ಹಾಗೂ ಅಜಯ್ ರಸ್ತೋಗಿ ಅವರನ್ನೊಳಗೊಂಡ ನ್ಯಾಯಪೀಠ, ತಮಿಳುನಾಡಿನ ಮುಸ್ಲಿಂ ವಕೀಲರ ಆಸೋಸಿಯೇಷನ್ ಸಲ್ಲಿಸಿರುವ ಆರ್ಜಿ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ. ಅಲ್ಲದೆ, ಈ ಆರ್ಜಿಯನ್ನು ಇದೇ ವಿಷಯವಾಗಿ ಸಲ್ಲಿಕೆಯಾಗಿರುವ ಆರ್ಜಿಗಳೊಂದಿಗೆ ಸೇರ್ಪಡೆಗೊಳಿಸಿದೆ.

ಸಂಸತ್ತು ಕಳೆದ ಜುಲೈ ತಿಂಗಳಲ್ಲಿ ಅಂಗೀಕರಿಸಿದ ಮುಸ್ಲಿಂ ಮಹಿಳೆಯರ ವಿವಾಹ ಹಕ್ಕುಗಳ ಸಂರಕ್ಷಣಾ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಈ ಆರ್ಜಿ ಸಲ್ಲಿಸಲಾಗಿದೆ. ಲಿಖಿತ ಅಥವಾ ಎಲೆಕ್ಟ್ರಾನಿಕ್ ವಿಧಾನ ಸೇರಿದಂತೆ ತ್ವರಿತ ತ್ರಿವಳಿ ತಲಾಖ್ ನ ಎಲ್ಲಾ ಘೋಷಣೆಗಳು ಅನೂರ್ಜಿತ, ಕಾನೂನುಬಾಹಿರ ಎಂದು ತ್ರಿವಳಿ ತಲಾಖ್ ನಿಷೇಷ ಕಾಯ್ದೆ ಹೇಳುತ್ತದೆ. ತ್ವರಿತ ತ್ರಿವಳಿ ತಲಾಖ್ ನೀಡಿದ ಪತಿಗೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. ದಂಡದ ಮೊತ್ತವನ್ನು ಮ್ಯಾಜಿಸ್ಟ್ರೇಟ್ ನಿರ್ಧರಿಸಲಿದ್ದಾರೆ. ಅಪರಾಧಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪತ್ನಿ ಅಥವಾ ಆಕೆಯ ರಕ್ತ ಸಂಬಂಧಿ ನೀಡಿದರೆ ಮಾತ್ರ ಅಪರಾಧ ಮಾನ್ಯತೆ ಪಡೆಯುತ್ತದೆ.

ಅಪರಾಧ ಜಾಮೀನು ರಹಿತವಾಗಿದೆ. ಆದರೆ ಮ್ಯಾಜಿಸ್ಟ್ರೇಟ್ ಬಳಿ ಆರೋಪಿಗಳಿಗೆ ಜಾಮೀನು ನೀಡುವ ಅವಕಾಶವಿದೆ. ಜಾಮೀನು ನೀಡಲು ಸಮಂಜಸವಾದ ಕಾರಣಗಳು ಮ್ಯಾಜಿಸ್ಟ್ರೇಟ್ ಗೆ ತೃಪ್ತಿ ಹೊಂದಿದ್ದರೆ ಪತ್ನಿಯನ್ನು ಕೇಳಿದ ನಂತರವೇ ಜಾಮೀನು ನೀಡಬಹುದು ಎಂದು ಕಾಯ್ದೆ ಹೇಳುತ್ತದೆ. ಹೆಂಡತಿಗೆ ಜೀವನಾಂಶ ಭತ್ಯೆಗೆ ಅರ್ಹತೆ ಇದೆ. ಮೊತ್ತವನ್ನು ಮ್ಯಾಜಿಸ್ಟ್ರೇಟ್ ನಿರ್ಧರಿಸುತ್ತಾರೆ. ತನ್ನ ಅಪ್ರಾಪ್ತ ಮಕ್ಕಳನ್ನು ವಶಕ್ಕೆ ಪಡೆಯಲು ಪತ್ನಿಗೆ ಅರ್ಹತೆ ಇದೆ. ಬಂಧನದ ವಿಧಾನವನ್ನು ಮ್ಯಾಜಿಸ್ಟ್ರೇಟ್ ನಿರ್ಧರಿಸುತ್ತಾರೆ ಎಂದು ಹೊಸಕಾಯ್ದೆ ಹೇಳುತ್ತದೆ. ಈ ಮೊದಲು ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗಿರುವ ಇತರ ಮೂರು ಆರ್ಜಿಗಳನ್ನು ಸಮಸ್ತ ಕೇರಳ ಜಮೈಥುಲ್ ಉಲೇಮಾ,ಸಯ್ಯದ್ ಫಾರೂಕ್ ಹಾಗೂ ಜಮೈತ್ ಉಲೇಮಾ –ಹಿ- ಹಿಂದ್ ಸಲ್ಲಿಸಿವೆ.

SCROLL FOR NEXT