ದೇಶ

ಒಡಿಶಾ: ಟೀ ಮಾರುತ್ತಿದ್ದ ವ್ಯಕ್ತಿ ಇಂದು ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಹಾಯಕ!

Sumana Upadhyaya

ಭುವನೇಶ್ವರ: ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕೆ ಒಡಿಶಾದ ಭುವನೇಶ್ವರದ ಅಜಯ್ ಬಹದ್ದೂರ್ ಸಿಂಗ್ ಬಡ ಕುಟುಂಬದ 19 ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.


ಖ್ಯಾತ ಗಣಿತಜ್ಞ ಆನಂದ್ ಕುಮಾರ್ ಅವರ ಸೂಪರ್ 30 ಕಾರ್ಯಕ್ರಮದ ಮಾದರಿಯಲ್ಲಿ 47 ವರ್ಷದ ಸಿಂಗ್ ಅವರ ಈ ತರಬೇತಿ ಕಾರ್ಯಕ್ರಮವಿದೆ. ಇವರ ಶ್ರಮಕ್ಕೆ ತಕ್ಕಂತೆ ಕಳೆದ ವರ್ಷ ನೀಟ್ ಪರೀಕ್ಷೆಯಲ್ಲಿ 14 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 2018ರಲ್ಲಿ 20ರಲ್ಲಿ 18 ವಿದ್ಯಾರ್ಥಿಗಳು ಅರ್ಹವಾಗಿದ್ದರು.


ಬಹದ್ದೂರ್ ಸಿಂಗ್ ಗೆ ವೈದ್ಯನಾಗುವ ಬಯಕೆಯಿತ್ತು, ಅದು ಈಡೇರಲಿಲ್ಲ, ಅದಕ್ಕಾಗಿ 2017ರಲ್ಲಿ ಜಿಂದಗಿ ಫೌಂಡೇಶನ್ ಆರಂಭಿಸಿ ಸೌಲಭ್ಯವಂಚಿತ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮುಂದಾದರು.


ನಾನು ಎಂಬಿಬಿಎಸ್ ಗೆ ತಯಾರಿ ನಡೆಸುತ್ತಿರುವಾಗ ನನ್ನ ತಂದೆ ತೀವ್ರ ಅನಾರೋಗ್ಯಕ್ಕೀಡಾದರು. ಆಗ ನಮ್ಮ ಆಸ್ತಿಯನ್ನೆಲ್ಲಾ ಮಾರಾಟ ಮಾಡಿ ಟೀ ಮಾರಿ ಜೀವನ ನಡೆಸಲಾರಂಭಿಸಿದೆವು. ನನ್ನಂತಿರುವ ಬಡ ಮಕ್ಕಳಿಗೆ ಸಹಾಯ ಮಾಡುವ ಬಯಕೆ ನನ್ನಲ್ಲಿತ್ತು. ನಾನು ಸಂಪಾದಿಸುವುದರಲ್ಲಿ ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟು ಸೌಲಭ್ಯ ಕೊಡಿಸುತ್ತೇನೆ ಎನ್ನುತ್ತಾರೆ ಸಿಂಗ್.
ಕಳೆದ ವರ್ಷ ಇವರ ಬಳಿ ಕಲಿತ ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳಿಗೆ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಕ್ಕಿದೆ. ಈ ವರ್ಷ 14 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.


ನನ್ನ ತಂದೆ ಕೂಲಿ ಕಾರ್ಮಿಕ, 12ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿ ಓದಿದೆ. ವೈದ್ಯೆಯಾಗಬೇಕೆಂಬ ಆಸೆಯಿತ್ತು. ಆದರೆ ನನ್ನನ್ನು ಓದಿಸುವಷ್ಟು ತಂದೆ-ತಾಯಿಯಲ್ಲಿ ಹಣವಿಲ್ಲ. ಜಿಂದಗಿ ಫೌಂಡೇಶನ್ ಬಗ್ಗೆ ಕೇಳಿದೆ. ಅಲ್ಲಿ ತರಬೇತಿಗೆ ಸೇರಿಕೊಂಡೆ, ಕಷ್ಟಪಟ್ಟು ಓದಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆಯುತ್ತೇನೆ ಎನ್ನುತ್ತಾರೆ ವಿದ್ಯಾರ್ಥಿನಿ ರಾಣಿ.


ಬೇರೆ ಕಡೆಗಳಲ್ಲಿ ಕೂಡ ಸಂಸ್ಥೆ ತೆರೆಯುವ ಆಸೆ ಸಿಂಗ್ ಗಿದೆ. ಒಡಿಶಾ ನನ್ನ ಕರ್ಮಭೂಮಿ, ನನ್ನ ಜನ್ಮಸ್ಥಳ ಜಾರ್ಖಂಡ್ ನ ದಿಯೊಗರ್ ನಲ್ಲಿ ಕೂಡ ಪ್ರಾಜೆಕ್ಟ್ ಆರಂಭಿಸುವ ಇಚ್ಛೆಯಿದೆ ಎಂದರು.
 

SCROLL FOR NEXT