ದೇಶ

ಸೇನೆಯ ಕೆಣಕಿ ಸಾವನ್ನಪ್ಪಿದ ಪಾಕ್ ಸೈನಿಕ, ಶವ ಪಡೆಯಲು ಬಿಳಿ ಧ್ವಜ ಪ್ರದರ್ಶನ

Srinivasamurthy VN

ಕದನ ವಿರಾಮ ಉಲ್ಲಂಘನೆ ವೇಳೆ ಭಾರತೀಯ ಸೈನಿಕರಿಂದ ಹತರಾಗಿದ್ದ ಪಾಕಿಸ್ತಾನಿ ಸೈನಿಕರು

ಶ್ರೀನಗರ: ಕದನ ವಿರಾಮ ಉಲ್ಲಂಘನೆ ಮಾಡಿ ಭಾರತೀಯ ಸೈನಿಕರ ಪೋಸ್ಟ್ ಗಳ ಮೇಲೆ ದಾಳಿ ಮಾಡಲು ಯತ್ನಿಸಿದ್ದ ಪಾಕಿಸ್ತಾನಿ ಸೈನಿಕರು ಇದೀಗ ತಮ್ಮ ಸಾವನ್ನಪ್ಪಿದ ಸೈನಿಕರ ಶವಗಳ ಹಿಂಪಡೆಯಲು ಬಿಳಿ ದ್ವಜ ಪ್ರದರ್ಶಿಸಿದ ಘಟನೆ ಶುಕ್ರವಾರ ನಡೆದಿದೆ.

ಮೂಲಗಳ ಪ್ರಕಾರ ಪಿಒಕೆ ಬಳಿ ಇರುವ ಹಾಜಿಪುರ ಸೆಕ್ಚರ್ ನಲ್ಲಿ ಭಾರತೀಯ ಪೋಸ್ಟ್ ಗಳ ಮೇಲೆ ದಾಳಿ ವೇಳೆ ಸಾವನ್ನಪ್ಪಿದ್ದ ಪಾಕ್ ಸೈನಿಕ ಸೆಪೋಯ್ ಗುಲಾಂ ರಸೂಲ್ ಅವರ ಪಾರ್ಥೀವ ಶರೀರವನ್ನು ವಾಪಸ್ ಪಡೆಯಲು ಪಾಕಿಸ್ತಾನಿ ಸೇನಾಧಿಕಾರಿಗಳು ಬಿಳಿಧ್ವಜ ಪ್ರದರ್ಶನ ಮಾಡಿ ದಾಳಿ ಮಾಡದಂತೆ ಭಾರತೀಯ ಸೈನಿಕರನ್ನು ಮನವಿ ಮಾಡಿದ್ದಾರೆ. 

ಸೆಪೋಯ್ ಗುಲಾಂ ರಸೂಲ್ ಅವರು, ಪಾಕಿಸ್ತಾನದ ಪಂಜಾಬ್ ನ ಬಹವಲ್ ನಗರದ ಪ್ರಾಂತ್ಯದಲ್ಲಿ  ಕರ್ತವ್ಯ ನಿರತರಾಗಿದ್ದರು. ಈ ವೇಳೆ ಭಾರತೀಯ ಪೋಸ್ಟ್ ಗಳನ್ನು ಗುರಿಮಾಡಿಕೊಂಡು ದಾಳಿ ನಡೆಸಿದ್ದರು. ಭಾರತೀಯ ಸೈನಿಕರು ಕೂಡ ಪ್ರತಿದಾಳಿ ಮಾಡಿದಾಗ ಅವರಿಗೆ ಗುಂಡು ತಗುಲಿ ಅವರು ಸಾವನ್ನಪ್ಪಿದ್ದರು. ಇನ್ನು ಕಳೆದ ಜುಲೈ 30-31ರಂದೂ ಕೂಡ ಕೆರಾನ್ ಸೆಕ್ಟರ್ ನಲ್ಲಿ ನಡೆದ ಕದನ ವಿರಾಮ ಉಲ್ಲಂಘನೆ ವೇಳೆ ಪಾಕಿಸ್ತಾನದ ಐದರಿಂದ ಏಳು ಮಂದಿ ಸೈನಿಕರನ್ನು ಭಾರತೀಯ ಸೇನೆ ಹತ್ಯೆಗೈದಿತ್ತು. 

ಪಾಕ್ ಸೇನೆಯಿಂದ ಭಾರಿ ಪ್ರಮಾಣದ ಶೆಲ್ಲಿಂಗ್, ಗಡಿ ಗ್ರಾಮದ ಮನೆಗಳಿಗೆ ತೀವ್ರ ಹಾನಿ
ಇನ್ನು ಪಾಕಿಸ್ತಾನ ಸೇನೆ ಇಂದೂ ಕೂಡ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಗಡಿಯಲ್ಲಿ ತೀವ್ರ ಪ್ರಮಾಣದ ಶೆಲ್ಲಿಂಗ್ ನಡೆಸಿದೆ. ಪರಿಣಾಮ ಭಾರತೀಯ ಗಡಿಯಲ್ಲಿರುವ ಗ್ರಾಮಗಳ ಮನೆಗಳ ಮೇಲೆ ಶೆಲ್ ಗಳ ಬೀಳುತ್ತಿದ್ದು, ಬಹುತೇಕ ಮನೆಗಳು ಹಾನಿಗೀಡಾಗಿವೆ. ಪೂಂಛ್ ಸೆಕ್ಟರ್ ಗೆ ಸಮೀಪದಲ್ಲಿರುವ ಬಾಲಾಕೋಟ್, ಮಾನ್ ಕೋಟ್ ನಲ್ಲಿ ತೀವ್ರ ಶೆಲ್ಲಿಂಗ್ ನಡೆಯುತ್ತಿದೆ. ಅಂತೆಯೇ ಪಾಕಿ ಸೈನಿಕರಿಗೆ ಭಾರತೀಯ ಸೇನೆ ಕೂಡ ಸ್ಪಷ್ಟ ತಿರುಗೇಟು ನೀಡುತ್ತಿದ್ದು, ಭಾರತ ಕೂಡ ತೀವ್ರ ಪ್ರಮಾಣದಲ್ಲಿ ಶೆಲ್ಲಿಂಗ್ ನಡೆಸುತ್ತಿದೆ.

SCROLL FOR NEXT