ದೇಶ

ಪಂಜಾಬ್: ನಾಲ್ವರು ಸಿಖ್ಖರ ಮೃತದೇಹಗಳನ್ನು ಸ್ವದೇಶಕ್ಕೆ ತರಲು ಎಂಇಎ ನೆರವು ಯಾಚಿಸಿದ ಮುಖ್ಯಮಂತ್ರಿ

Nagaraja AB

ಚಂಡೀಗಢ: ಇಟಲಿಯಲ್ಲಿ ಒಳಚರಂಡಿಯಲ್ಲಿ ಸಿಲುಕಿ ಮೃತಪಟ್ಟಿದ್ದ ನಾಲ್ವರು ಸಿಖ್ಖರ ಮೃತದೇಹಗಳನ್ನು ಸ್ವದೇಶಕ್ಕೆ ತರಲು ನೆರವು ನೀಡುವಂತೆ  ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್  ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಕೋರಿದ್ದಾರೆ.

ಉತ್ತರ ಇಟಲಿಯ ಫಾರ್ಮ್ ವೊಂದರಲ್ಲಿ ಗುರುವಾರ ಈ ಘಟನೆ ಸಂಭವಿಸಿತ್ತು. ಹಸುಗಳ ಸಗಣಿಯಿಂದ ಕಾರ್ಬನ್ ಡೈ ಆಕ್ಸೈಡ್  ಅನಿಲ ಹೊರಹೊಮ್ಮಿ ನಾಲ್ವರು ಮೃತಪಟ್ಟಿರುವ ಬಗ್ಗೆ ವರದಿಯಾಗಿತ್ತು. 

ಮೃತರ ಪೈಕಿ 48 ವರ್ಷದ ಪ್ರೇಮ್ ಹಾಗೂ ತಸ್ರೀಮ್ ಸಿಂಗ್ ಎಂಬವರು ಸಹೋದರರಾಗಿದ್ದು, ಇವರೇ ಫಾರ್ಮ್ ನಡೆಸುತ್ತಿದ್ದರು ಎನ್ನಲಾಗಿದೆ. ಉಳಿದ ಕೆಲಸಗಾರರನ್ನು ಅರ್ಮಿಂದರ್ ಸಿಂಗ್ ಹಾಗೂ ಮಾಂಜಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. 

ನಾಲ್ವರು ಸಿಖ್ ಜನರು ಮೃತಪಟ್ಟಿರುವುದು ದುರದೃಷ್ಟಕರ ಸಂಗತಿಯಾಗಿದೆ. ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ನೆರವು ನೀಡುವಂತೆ ಭಾರತೀಯ ರಾಯಬಾರಿ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಜೈಶಂಕರ್ ಬಳಿ ಮನವಿ ಮಾಡುವುದಾಗಿ ಅಮರೀಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಜೈಶಂಕರ್, ಎಲ್ಲಾ ರೀತಿಯ ನೆರವು ನೀಡುವಂತೆ ಇಟಲಿಯಲ್ಲಿರುವ ರಾಯಬಾರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. 

SCROLL FOR NEXT