ದೇಶ

5 ವರ್ಷಗಳಲ್ಲಿ ಮೋದಿ ತೆಗೆದುಕೊಂಡ 50 ದೊಡ್ಡ ನಿರ್ಧಾರಗಳು ಭಾರತದ ಅದೃಷ್ಟವನ್ನೇ ಬದಲಿಸಿದೆ: ಅಮಿತ್ ಶಾ

Manjula VN

ನವದೆಹಲಿ: ಕಳೆದ 5 ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೆಗೆದುಕೊಂಡ 50 ಬಹುದೊಡ್ಡ ನಿರ್ಧಾರಗಳು ದೇಶದ ಅದೃಷ್ಟವನ್ನೇ ಬದಲಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಹೇಳಿದ್ದಾರೆ. 

ಅಖಿಲ ಭಾರತ ನಿರ್ವಹಣಾ ಸಂಘ (ಎಐಎಂಎ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಹಲವು ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ್ದ ಯುಪಿಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 

2013ರಲ್ಲಿ ಪ್ರತೀ ನಿತ್ಯ ಎಲ್ಲೆಲ್ಲಿಯೂ ಭ್ರಷ್ಟಾಚಾರದ್ದೇ ಸುದ್ದಿಗಳಿರುತ್ತಿದ್ದವು. ಗಡಿಯಲ್ಲಿ ಅಭದ್ರತೆ ಕಾಡುತ್ತಿರುವುದು, ಭಾರತೀಯ ಯೋಧರ ಶಿರಚ್ಛೇದ ಮಾಡುವುದು, ಅವಮಾನ ಮಾಡುತ್ತಿರುವ ಸುದ್ದಿಗಳೇ ಕೇಳಿ ಬರುತ್ತಿದ್ದವು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಸಚಿವಾಲಯದಲ್ಲಿದ್ದ ಪ್ರತೀ ಸಚಿವರೂ ಪ್ರಧಾನಮಂತ್ರಿಯೆಂದು ತಿಳಿದಿದ್ದರು. ಸ್ವತಃ ಪ್ರಧಾನಮಂತ್ರಿಗಳೇ ತಾವು ಪ್ರಧಾನಿಯೆಂದು ಆಲೋಚಿಸುತ್ತಿರಲಿಲ್ಲ. 

ವೋಟ್ ಬ್ಯಾಂಕ್ ಬಗ್ಗೆ ಚಿಂತಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯಾವುದೇ ನಿರ್ಧಾರಗಳನ್ನೂ ತೆಗೆದುಕೊಂಡಿಲ್ಲ. ಸಾಮಾನ್ಯರು ಹಾಗೂ ಅವರ ಕಲ್ಯಾಣಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ. 

ಇದೇ ವೇಳೆ ಭಾರತೀಯ ಸೇನಾಪಡೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಹಾಗೂ ವಾಯುದಾಳಿ ಬಗ್ಗೆ ಮಾತನಾಡಿರುವ ಅವರು, ಸರ್ಕಾರ ತೆಗೆದುಕೊಂಡ ಈ ನಿರ್ಧಾರಗಳು ಜನರು ಸಾಕಷ್ಟು ಸಂತಸ ಪಡಿಸಿತ್ತು. ಇಂತಹ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಹೆಚ್ಚಿನ ಪ್ರೋತ್ಸಾಹ ಬೇಕು ಎನ್ನುವುದನ್ನು ಯಾರು ಮರೆಯಬಾರದು. ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಕೇಂದ್ರ ಎಂದಿಗೂ ಪಾಕಿಸ್ತಾನಕ್ಕೆ ಅವಕಾಶ ನೀಡುವುದಿಲ್ಲ. ಪ್ರಧಾನಿ ಮೋದಿಯವರು ತೆಗೆದುಕೊಂಡ ದಿಟ್ಟ ನಿರ್ಧಾರಗಳಿಂದ ಜಾಗತಿಕ ಸಮುದಾಯದಲ್ಲಿ ಭಾರತದ ಬಗ್ಗೆ ಇದ್ದ ಚಿಂತನೆಗಳು, ಮನಸ್ಥಿತಿಗಳು ಬದಲಾಗಿವೆ ಎಂದು ತಿಳಿಸಿದ್ದಾರೆ. 

ಇದರಂತೆ ಆರ್ಟಿಕಲ್ 370 ರದ್ದು ಕುರಿತಂತೆ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕುವುದು ಹೇಗೆ ಎಂಬುದರ ಬಗ್ಗೆ ಯಾವಾಗಲೂ ಜನರು ಮಾತನಾಡುತ್ತಿದ್ದರು. ಆ.5 ರಂದು ಪ್ರಧಆನಿ ಮೋದಿಯವರು ಇಂತಹ ದಿಟ್ಟ ನಿರ್ಧಾರ ತೆಗೆದುಕೊಂಡರು. ಆ.5 ರಿಂದ ಸೆ.17ರವರೆಗೂ ಕಾಶ್ಮೀರದಲ್ಲಿ ಒಂದು ಸಣ್ಣ ಗುಂಡು ಕೂಡ ಹಾರಿಲ್ಲ. ಯಾವುದೇ ಪ್ರಾಣಹಾನಿಗಳೂ ಆಗಿಲ್ಲ. ಕಾಶ್ಮೀರದಲ್ಲಿಂದು ಶಾಂತಿಯುತ ವಾತಾವರಣ ನಿರ್ಮಾಣವಾಗಿದೆ ಎಂದಿದ್ದಾರೆ. 

SCROLL FOR NEXT