ದೇಶ

ಪುಲ್ವಾಮಾ ದಾಳಿ ರೂವಾರಿಯ ಸಹಚರ ದೇಶಾದ್ಯಂತ ದಾಳಿ ಮಾಡಲು ಸಂಚು ರೂಪಿಸಿದ್ದ; ಎನ್ಐಎ ಸ್ಫೋಟಕ ವರದಿ 

Sumana Upadhyaya

ನವದೆಹಲಿ: ಪುಲ್ವಾಮಾ ಭಯೋತ್ಪಾದಕ ದಾಳಿಯ ರೂವಾರಿ ಮುದಸ್ಸಿರ್ ಅಹ್ಮದ್ ಖಾನ್ ನ ನಿಕಟವರ್ತಿ ಜೈಶ್ ಎ ಮೊಹಮ್ಮದ್ ಸಂಘಟನೆಯ ಸಜ್ಜಿದ್ ಅಹ್ಮದ್ ಖಾನ್ ದೆಹಲಿ-ಎನ್ ಸಿಆರ್ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಎಂದು ರಾಷ್ಟ್ರೀಯ ತನಿಖಾ ದಳ(ಎನ್ಐಎ) ತಿಳಿಸಿದೆ.


ಅದು ನಿನ್ನೆ ದೆಹಲಿ ಕೋರ್ಟ್ ನಲ್ಲಿ ಸಲ್ಲಿಸಿದ ಪಿತೂರಿ ಕೇಸಿಗೆ ಸಂಬಂಧಿಸಿದ ಆರೋಪಪಟ್ಟಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಿದೆ.ಪುಲ್ವಾಮಾ ದಾಳಿಯಲ್ಲಿ ಸಜ್ಜಿದ್ ಭಾಗಿಯಾಗಿದ್ದ ಎಂದು ಸಹ ಶಂಕಿಸಲಾಗಿದೆ. 


ಕಳೆದ ಫೆಬ್ರವರಿ 14ರಂದು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಮಂದಿ ಯೋಧರು ಹುತಾತ್ಮರಾಗಿದ್ದರು. ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರಗಾಮಿಯೊಬ್ಬ ಸ್ಫೋಟಕವನ್ನು ಹೊತ್ತ ವಾಹನದಲ್ಲಿ ಸಾಗಿ ಆತ್ಮಹತ್ಯಾ ದಾಳಿ ನಡೆಸಿದ್ದ.


ರಾಷ್ಟ್ರೀಯ ತನಿಖಾ ಸಂಸ್ಥೆ ನಾಲ್ವರು ಜೈಶ್ ಎ ಮೊಹಮ್ಮದ್ ಸಂಘಟನೆಯ ನಿರ್ವಾಹಕರ ಮೇಲೆ ಸಂಚು ರೂಪಿಸಿದ ಬಗ್ಗೆ ವರದಿ ಸಲ್ಲಿಸಿದೆ. ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳಡಿಯಲ್ಲಿ ಆರೋಪ ದಾಖಲಾಗಿದೆ.


ಈ ದಾಳಿಯ ಪಿತೂರಿ ಹಿಂದೆ ಮುಡಸ್ಸಿರ್ ಎಂಬಾತ ಮಾಸ್ಟರ್ ಮೈಂಡ್ ಆಗಿದ್ದು ಈತ ನಂತರ ಕಳೆದ ಮಾರ್ಚ್ ನಲ್ಲಿ ಭದ್ರತಾ ಪಡೆಯೊಂದಿಗೆ ನಡೆದ ಎನ್ ಕೌಂಟರ್ ನಲ್ಲಿ ಹತನಾಗಿದ್ದಾನೆ ಎಂದು ಎನ್ಐಎ ಅಂತಿಮ ವರದಿಯಲ್ಲಿ ತಿಳಿಸಿದೆ.


ಜೈಶ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಹಿರಿಯ ಕಮಾಂಡರ್ ಗಳು ಭಾರತದ ವಿವಿಧ ಭಾಗಗಳಲ್ಲಿ ದಾಳಿ ನಡೆಸಲು ನಡೆಸಿದ್ದ ಪಿತೂರಿಗೆ ಸಂಬಂಧಪಟ್ಟದ್ದಾಗಿದೆ. ಆರೋಪಪಟ್ಟಿಯಲ್ಲಿ ಸಜ್ಜಿದ್ ಅಹ್ಮದ್ ಖಾನ್, ತನ್ವೀರ್ ಅಹ್ಮದ್ ಗನಿ, ಬಿಲಾಲ್ ಅಹ್ಮದ್ ಮಿರ್, ಮುಜಾಫರ್ ಅಹ್ಮದ್ ಭಟ್ ಗಳ ಹೆಸರಿದ್ದು ಇವರೆಲ್ಲರೂ ಪುಲ್ವಾಮಾ ನಿವಾಸಿಗಳಾಗಿದ್ದಾರೆ.

SCROLL FOR NEXT