ದೇಶ

ಪ್ರಧಾನಿ ಮೋದಿಗೆ ವಿಶೇಷ ಕುರ್ತಾ, ಬಂಗಾಳಿ ಸಿಹಿ ನೀಡಿ ಜನ್ಮದಿನದ ಶುಭ ಕೋರಿದ ಮಮತಾ

Lingaraj Badiger

ನವದೆಹಲಿ: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೆಹಲಿಯಲ್ಲಿ ಬುಧವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಪ್ರಧಾನಿ ನಿವಾಸದಲ್ಲಿ ನಡೆದ ಇಬ್ಬರೂ ನಾಯಕರ ಭೇಟಿಯ ವೇಳೆ ನಿನ್ನೆಯಷ್ಟೇ ತಮ್ಮ 69ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಪ್ರಧಾನಿ  ನರೇಂದ್ರ ಮೋದಿ ಅವರಿಗೆ, ಮಮತಾ ಬ್ಯಾನರ್ಜಿ ವಿಶೇಷ ಕುರ್ತಾ ಮತ್ತು ಬಂಗಾಳಿ ಸಿಹಿತಿಂಡಿಗಳನ್ನು ನೀಡಿದರು. ಮೋದಿಯವರಿಗೆ ಖುದ್ದಾಗಿ  ಮತ್ತೊಮ್ಮೆ ಜನ್ಮದಿನ ಶುಭಾಶಯ ಕೋರಿದರು.

ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ರಾಜ್ಯದ ಹೆಸರು ಬದಲಾವಣೆ ಸಂಬಂಧ  ಪ್ರಧಾನಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪ್ರಧಾನಿ ಜೊತೆಗಿನ ಭೇಟಿ ಸೌಹಾರ್ಧಯುತವಾಗಿತ್ತು ಎಂದು ಹೇಳಿದರು.

ಭೇಟಿಯ ಸಮಯದಲ್ಲಿ ಹಲವಾರು ವಿಷಯಗಳು ಚರ್ಚೆಯಾಗಿವೆ ಎಂದು ವರದಿಯಾಗಿದೆ. ರಾಜ್ಯದ ಹಲವು ಸಮಸ್ಯೆಗಳು, ಎನ್ ಆರ್ ಸಿ,  ಕುರಿತು ಮಮತಾ ಬ್ಯಾನರ್ಜಿ ಪ್ರಧಾನಿ ಅವರೊಂದಿಗೆ ಪ್ರಸ್ತಾಪಿಸಿದರು ಎಂದು ತಿಳಿದುಬಂದಿದೆ. 

ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಇಬ್ಬರೂ ನಾಯಕರ ಮೊದಲ ಭೇಟಿ ಇದಾಗಿದೆ. 

ಎಲ್ಲ ವಿಷಯಗಳಲ್ಲೂ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟುವಾಗಿ ಟೀಕಿಸುವ ಮಮತಾ ಬ್ಯಾನರ್ಜಿ ಅವರ ಮೋದಿ ಭೇಟಿ ತೀವ್ರ ಕುತೂಹಲ ಕೆರಳಿಸಿತ್ತು. ಪ್ರಧಾನಿಯಾಗಿ ಎರಡನೇ ಬಾರಿ  ನರೇಂದ್ರ ಮೋದಿ ಪ್ರಮಾಣವಚನ ಸಮಾರಂಭ ಮತ್ತು ಜೂನ್‌ನಲ್ಲಿ ನಡೆಯುವ ನೀತಿ ಆಯೋಗದ ಸಭೆಗೆ ಮಮತಾ ಗೈರುಹಾಜರಾಗಿದ್ದರು.

SCROLL FOR NEXT