ದೇಶ

ಪಾಕಿಸ್ತಾನಕ್ಕೆ ಭಾರತವನ್ನು ಟೀಕಿಸುವ ಅರ್ಹತೆ ಕೂಡ ಇಲ್ಲ: ಶಶಿ ತರೂರ್

Srinivasamurthy VN

'ಪಕ್ಷಗಳ ನಡುವೆ ಯಾವುದೇ ರೀತಿಯ ಬೇಧವಿರಲಿ, ಆದರೆ ದೇಶದ ಆಸ್ತಿತ್ವದ ವಿಚಾರ ಬಂದಾಗ ನಾವೆಲ್ಲರೂ ಒಂದೇ'

ಪುಣೆ: ಕಾಶ್ಮೀರ ವಿಚಾರವಾಗಿ ಭಾರತದವನ್ನು ಪದೇ ಪದೇ ಕೆಣಕುತ್ತಿರುವ ಪಾಕಿಸ್ತಾನಕ್ಕೆ ಕನಿಷ್ಠ ಪಕ್ಷ ಭಾರತವನ್ನು ಟೀಕಿಸುವ ಅರ್ಹತೆ ಕೂಡ ಇಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಸಂಸದ ಶಶಿ ತರೂರ್ ಹೇಳಿದ್ದಾರೆ.

ಪುಣೆ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಶಶಿ ತರೂರ್, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಕಾಶ್ಮೀರ ವಿಚಾರ ಬಂದಾಗ ನಾವೆಲ್ಲರೂ ಪಕ್ಷಬೇಧ ಮರೆತು ಒಟ್ಟಾಗಿ ನಿಲ್ಲಬೇಕು. ನಿಜ ನಮ್ಮ ಪಕ್ಷಗಳ ಸಿದ್ಧಾಂತಗಳು ಬೇರೆ ಬೇರೆಯೇ ಇರಬಹುದು. ನಮ್ಮ ಪಕ್ಷಗಳ ನಡುವೆ ಯಾವುದೇ ರೀತಿಯ ಬೇಧವಿರಲಿ, ಆದರೆ ದೇಶದ ಆಸ್ತಿತ್ವದ ವಿಚಾರ ಬಂದಾಗ ನಾವೆಲ್ಲರೂ ಒಂದೇ.  ಪ್ರಮುಖವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಧನಿ ಮತ್ತು ಕೂಗು ಒಂದೇ ಆಗಿರಬೇಕು ಎಂದು ಹೇಳಿದ್ದಾರೆ.

ನಾನು ಈ ಮೂಲಕ ಪಾಕಿಸ್ತಾನಕ್ಕೆ ಒಂದು ಸಂದೇಶ ಸಾರಲು ಇಚ್ಛಿಸುತ್ತೇನೆ. ನಮ್ಮ ನಡುವೆ ಪಕ್ಷ ಬೇಧ ಇರಬಹುದು. ಸಿದ್ಧಾಂತಗಳು ಬೇರೆ ಇರಬಹುದು. ಆಸಕ್ತಿಗಳು ಬೇರೆ ಬೇರೆಯೇ ಇರಬಹುದು. ಆದರೆ ದೇಶದ ಹಿತಾಸಕ್ತಿ ವಿಚಾರಕ್ಕೆ ಬಂದಾಗ ನಾವೆಲ್ಲರೂ ಭಾರತೀಯರೇ. ವಿದೇಶಾಂಗ ನೀತಿ ಕಾಂಗ್ರೆಸ್ ಗೇ ಒಂದು ಬಿಜೆಪಿಗೆ ಒಂದು ಇರಲಾರದು. ದೇಶದ ಸಾರ್ವಭೌತ್ವ ಮತ್ತು ಆಸ್ತಿತ್ವದ ಪ್ರಶ್ನೆ ಬಂದಾಗ ನಾವೆಲ್ಲರೂ ಒಗ್ಗೂಡುತ್ತೇವೆ ಎಂದು ಹೇಳಿದರು.

ಇದೇ ವೇಳೆ ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುತ್ತಿದ್ದ ವಿಧಿ 370ರ  ರದ್ಧತಿ ಕುರಿತು ಕೇಂದ್ರ ಸರ್ಕಾರದ ವಿರುದ್ಧವೂ ಕಿಡಿಕಾರಿದ ತರೂರ್, ಕಾಶ್ಮೀರ ಜನಪ್ರತಿನಿಧಿಗಳನ್ನು ಪರಿಗಣನೆಗೇ ತೆಗೆದುಕೊಳ್ಳದೇ ಕೇಂದ್ರ ಸರ್ಕಾರ ವಿಧಿ 370 ರದ್ಧು ಮಾಡಿದ್ದು ತಪ್ಪು. ಈ ವಿಚಾರವಾಗಿ ಬಿಜೆಪಿ ಮತ್ತು ಮೋದಿ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಹೇಳಿದರು.

ಪಾಕಿಸ್ತಾನಕ್ಕೆ ಭಾರತವನ್ನು ಟೀಕಿಸುವ ಅರ್ಹತೆ ಕೂಡ ಇಲ್ಲ
ಇನ್ನು ಪಾಕಿಸ್ತಾನಕ್ಕೆ ಭಾರತವನ್ನು ಟೀಕಿಸುವ ಅರ್ಹತೆ ಕೂಡ ಇಲ್ಲ ಎಂದು ಹೇಳಿರುವ ಶಶಿತರೂರ್, ಪಿಒಕೆಯಲ್ಲಿ ಏನಾಗುತ್ತಿದೆ ಎಂದು ಇಡೀ ಜಗತ್ತಿಗೆ ಗೊತ್ತಿದೆ. ಇಂತಹ ಪಾಕಿಸ್ತಾನ ಕಾಶ್ಮೀರ ವಿಚಾರವಾಗಿ ಭಾರತವನ್ನು ಟೀಕಿಸುತ್ತಿದೆ ಎಂದು ಹೇಳಿದರು.
 

SCROLL FOR NEXT