ದೇಶ

ಗೋರಖ್ ಪುರ ಮಕ್ಕಳ ಸಾವು ದುರಂತ: ಡಾ. ಕಫೀಲ್ ಖಾನ್ ದೋಷಮುಕ್ತ

Srinivasamurthy VN

ಲಖನೌ: ಉತ್ತರ ಪ್ರದೇಶದ ಗೋರಖ್ ಪುರದ ಬಿಆರ್ ಡಿ ಮೆಡಿಕಲ್ ಕಾಲೇಜಿನಲ್ಲಿ ಆಮ್ಲಜನಕ ಕೊರತೆಯಿಂದಾಗಿ ಮಕ್ಕಳ ಸರಣಿ ಸಾವು ದುರಂತಕ್ಕೆ ಸಂಬಂಧಿಸದಂತೆ ಆರೋಪ ಎದುರಿಸುತ್ತಿದ್ದ ಡಾ.ಕಫೀಲ್ ಖಾನ್ ರನ್ನು ದೋಷಮುಕ್ತಗೊಳಿಸಲಾಗಿದೆ.

ಕಳೆದ ಆಗಸ್ಟ್ 2017ರಲ್ಲಿ ಗೋರಖ್ ಪುರದ ಬಿಆರ್ ಡಿ ಮೆಡಿಕಲ್ ಕಾಲೇಜಿನಲ್ಲಿ ಆಮ್ಲಜನಕ ಕೊರತೆಯಿಂದ 60ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿದ್ದರು. ಈ ಪ್ರಕರಣ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಅಂದು ತುರ್ತು ತನಿಖೆ ನಡೆಸಿದ್ದ ಉತ್ತರ ಪ್ರದೇಶ ಆರೋಗ್ಯ ಇಲಾಖೆ ಕರ್ತವ್ಯದಲ್ಲಿದ್ದ ಮಕ್ಕಳ ತಜ್ಞ ಡಾ. ಕಫೀಲ್ ಖಾನ್ ರನ್ನು ಅಮಾನತು ಮಾಡಿತ್ತು. 

ಅಲ್ಲದೆ ಡಾ. ಕಫೀಲ್ ಖಾನ್ ವಿರುದ್ಧ  ವೈದ್ಯಕೀಯ ನಿರ್ಲಕ್ಷ್ಯ, ಭ್ರಷ್ಟಾಚಾರ ಹಾಗೂ ಕರ್ತವ್ಯಲೋಪ ಆರೋಪ ಹೊರಿಸಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಲಾಗಿದ್ದ ಇಲಾಖಾ ತನಿಖೆಯಲ್ಲಿ ಕಫೀಲ್ ಖಾನ್ ರ ಮೇಲಿನ ಆರೋಪ ಸುಳ್ಳು ಎಂದು ಸಾಬೀತಾಗಿದ್ದು, ಈಗ ಈ ಆರೋಪಗಳಿಂದ ಅವರು ಮುಕ್ತರಾಗಿದ್ದಾರೆ. ಇಲಾಖಾ ತನಿಖೆಯ ವರದಿಯನ್ನು  ಬಿಆರ್ ಡಿ ಮೆಡಿಕಲ್ ಕಾಲೇಜಿನ ಅಧಿಕಾರಿಗಳು ಗುರುವಾರ ಡಾ. ಕಫೀಲ್ ಖಾನ್ ಅವರಿಗೆ ಹಸ್ತಾಂತರಿಸಿದ್ದು, ಸೇವೆಯಿಂದ ಅಮಾನತುಗೊಂಡಿದ್ದ ಮಕ್ಕಳ ತಜ್ಞ ಡಾ. ಕಫೀಲ್ ಖಾನ್ ಅವರನ್ನು ಘಟನೆ ನಡೆದು ಎರಡು ವರ್ಷಗಳ ನಂತರ ಇಲಾಖಾ ತನಿಖೆ ದೋಷಮುಕ್ತಗೊಳಿಸಿದೆ.

ಇಲಾಖಾ ತನಿಖೆಯ ವರದಿಯನ್ನು ತನಿಖಾಧಿಕಾರಿ, ಅಂಚೆ ಚೀಟಿ ಹಾಗೂ ನೋಂದಣಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಹಿಮಾಂಶು ಕುಮಾರ್ ಅವರು ಉತ್ತರ ಪ್ರದೇಶದ ವೈದ್ಯಕೀಯ ಶಿಕ್ಷಣ ಇಲಾಖೆಗೆ ಎ.18ರಂದು ನೀಡಿದ್ದರು. ಈ 15 ಪುಟಗಳ ವರದಿಯಲ್ಲಿ  ಡಾ. ಕಫೀಲ್ ಖಾನ್ ಅವರು ವೈದ್ಯಕೀಯ ನಿರ್ಲಕ್ಷ್ಯ  ತೋರಿಸಿಲ್ಲ ಹಾಗೂ 54 ಗಂಟೆಗಳ ತನಕ ಆಸ್ಪತ್ರೆ ಆಮ್ಲಜನಕ ಕೊರತೆ ಅನುಭವಿಸುತ್ತಿದ್ದಾಗ 2017ರ ಆಗಸ್ಟ್ 10,11ರಂದು ರಾತ್ರಿ ಅವರು ಪರಿಸ್ಥಿತಿಯನ್ನು ನಿಭಾಯಿಸಲು ಸರ್ವ ಪ್ರಯತ್ನ ನಡೆಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

9 ತಿಂಗಳ ಸೆರೆವಾಸ
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ಕಫೀಲ್ ಖಾನ್ ಒಂಬತ್ತು ತಿಂಗಳು ಸೆರೆವಾಸ ಅನುಭವಿಸಿದ್ದು, ಜಾಮೀನಿನ ಮೇಲೆ ಹೊರಗಿದ್ದರು. ಬಿಆರ್ ಡಿ ಮೆಡಿಕಲ್ ಕಾಲೇಜು ಇಲ್ಲಿಯ ತನಕ ಅವರ ವಜಾ ಆದೇಶವನ್ನು ವಾಪಸ್ ತೆಗೆದುಕೊಂಡಿರಲಿಲ್ಲ. ಡಾ. ಖಾನ್ ಈಗಾಗಲೇ ಘಟನೆ ಕುರಿತಂತೆ ಸಿಬಿಐ ತನಿಖೆಗೆ ಕೋರಿದ್ದಾರೆ.

SCROLL FOR NEXT