ದೇಶ

ಪರಮಾಣು ಶಸ್ತ್ರಾಸ್ತ್ರ ದಾಳಿ ಬೆದರಿಕೆ: ಇಮ್ರಾನ್ ಖಾನ್ ವಿರುದ್ಧ ಬಿಹಾರದಲ್ಲಿ ದೂರು ದಾಖಲು!

Srinivasamurthy VN

ಪಾಟ್ನಾ: ಕಾಶ್ಮೀರ ವಿಚಾರವಾಗಿ ಭಾರತಕ್ಕೆ ಪದೇ ಪದೇ ಪರಮಾಣು ಶಸ್ತ್ಪಾಸ್ತ್ರಗಳ ದಾಳಿ ಬೆದರಿಕೆ ಹಾಕುತ್ತಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ದೂರು ದಾಖಲಿಸಲಾಗಿದೆ.

ಇತ್ತೀಚೆಗೆ ವಿಶ್ವಸಂಸ್ಛೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್, ಕಾಶ್ಮೀರದಲ್ಲಿ ಅಮಾನವೀಯ ಕರ್ಫ್ಯೂ ಹೇರಲಾಗಿದ್ದು, ಕರ್ಫ್ಯೂ ಹಿಂಪಡೆದರೆ ರಕ್ತದೋಕುಳಿಯಾಗಲಿದೆ. ಅಂತೆಯೇ ಇದೇ ವಿಚಾರವಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸಂಭವಿಸಿದರೆ ಎರಡು ಅಣ್ವಸ್ತ್ರರಾಷ್ಟ್ರಗಳು ಮಾತ್ರವಲ್ಲದೇ ಅದರ ಪರಿಣಾಮ ಇತರೆ ರಾಷ್ಟ್ರಗಳೂ ಕೂಡ ಅನುಭವಿಸಬೇಕು ಎಂದು ಎಚ್ಚರಿಕೆ ನೀಡಿದ್ದರು.

ಇದೀಗ ಇದೇ ವಿಚಾರವಾಗಿ ಇಮ್ರಾನ್ ಖಾನ್ ವಿರುದ್ಧ ದೂರು ದಾಖಲಾಗಿದ್ದು, ಭಾರತದ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸಿದ್ದಕ್ಕಾಗಿ ಮತ್ತು ಪರಮಾಣು ಯುದ್ಧದ ಬೆದರಿಕೆ ಹಾಕಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ. ಬಿಹಾರದ ಮುಜಾಫರ್ಪುರ್ ಜಿಲ್ಲೆ ಕೋರ್ಟ್ ನಲ್ಲಿ ದೂರು ದಾಖಲಾಗಿದೆ.

ಮೂಲಗಳ ಪ್ರಕಾರ ಸುಧೀರ್ ಕುಮಾರ್ ಓಜಾ ಎನ್ನುವ ಸ್ಥಳೀಯ ವಕೀಲ ಇಮ್ರಾನ್ ಖಾನ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಮುಜಫರ್ಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಈ ಪ್ರಕರಣ ದಾಖಲಾಗಿದೆ. ತನ್ನ ದೂರಿನ ಆಧಾರದ ಮೇಲೆ ಖಾನ್ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ ನೀಡುವಂತೆ ದೂರುದಾರ ನ್ಯಾಯಾಲಯಕ್ಕೆ ಕೋರಿದ್ದಾರೆ. 370 ನೇ ವಿಧಿಯನ್ನು ರದ್ದುಪಡಿಸುವುದನ್ನು ಉಲ್ಲೇಖಿಸಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತದ ವಿರುದ್ಧ ಮಾಡಿದ ಹೇಳಿಕೆಗಳು ಕೇವಲ ಒಂದು ಭಾಗದ ಜನರನ್ನು ಪ್ರಚೋದಿಸುತ್ತದೆ ಮತ್ತು ದೇಶದಲ್ಲಿ ಶಾಂತಿಗೆ ಭಂಗ ತರುತ್ತದೆ ಎಂದು ಓಜಾ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

SCROLL FOR NEXT