ದೇಶ

ಕೊರೋನಾ ಹಾಟ್'ಸ್ಪಾಟ್ ನಿಜಾಮುದ್ದೀನ್ ಮಸೀದಿ ಈಗ ಜನರಿಂದ ಮುಕ್ತ, 2,361 ಮಂದಿ ಸ್ಥಳಾಂತರ: ಸಿಸೋಡಿಯಾ

Manjula VN

ನವದೆಹಲಿ: ಕೊರೋನಾ ಹಾಟ್'ಸ್ಪಾಟ್ ಎಂದೇ ಕರೆಯಲಾಗುತ್ತಿರುವ ದೆಹಲಿ ನಿಜಾಮುದ್ದೀನ್ ಮಸೀದಿ ಇದೀಗ ಜನರಿಂದ ಮುಕ್ತಗೊಂಡಿದ್ದು, ಮಸೀದಿ ಒಳಗೆ ಹಾಗೂ ಹೊರಗಿದ್ದ ಸುಮಾರು 2,361 ಮಂದಿಯನ್ನು ಸ್ಥಳಾಂತರಗೊಳಿಸಲಾಗಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಬುಧವಾರ ಹೇಳಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ ಮಾಡಿರುವ ಅವರು, ಮಸೀದಿಯಿಂದ 2,361 ಮಂದಿಯನ್ನು ಸ್ಥಳಾಂತರಗೊಳಿಸಲಾಗಿದ್ದು, 617 ಮಂದಿಯನ್ನು ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗಿದೆ. ಉಳಿದವರನ್ನು ಕ್ವಾರಂಟೈನಲ್ಲಿರಿಸಲಾಗಿದೆ ಎಂದು ಹೇಳಿದ್ದಾರೆ. 

36 ಗಂಟೆಗಳ ಈ ಸುದೀರ್ಘ ಕಾರ್ಯಾಚರಣೆಯಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ವೈದ್ಯಕೀಯ ಸಿಬ್ಬಂದಿ, ಆಡಳಿತ ಮಂಡಳಿ, ಪೊಲೀಸರು ಹಾಗೂ ಡಿಟಿಸಿ ಸಿಬ್ಬಂದಿಗಳು ಒಗ್ಗೂಡಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಈ ಮೂಲಕ ಹ್ಯಾಟ್ಸ್ ಆಫ್ ಹೇಳಲು ಬಯಸುತ್ತೇನೆಂದು ತಿಳಿಸಿದ್ದಾರೆ. 

ಈ ವರೆಗೂ 120 ಮಂದಿಯನ್ನ ಪರೀಕ್ಷೆಗೊಳಪಡಿಸಲಾಗಿದ್ದು, ಯಾರಲ್ಲೂ ವೈರಸ್ ದೃಢಪಟ್ಟಿಲ್ಲ. ಪರೀಕ್ಷೆಗೊಳಪಟ್ಟ ಬಹುತೇಕ ಮಂದಿ ಹೊರಗಿನಿಂದ ಬಂದವರೇ ಆಗಿದ್ದಾರೆ. ದೆಹಲಿ ಆಸ್ಪತ್ರೆಯಲ್ಲಿ 750 ಮಂದಿ ದಾಖಲಾಗಿದ್ದು, ಒಬ್ಬರು ಮಾತ್ರ ವೆಂಟಿಲೇಟರ್ ಸಪೋರ್ಟ್ ನಲ್ಲಿದ್ದಾರೆ. ಇಬ್ಬರು ಆಕ್ಸಿಜನ್ ಸಹಾಯದಲ್ಲಿದ್ದಾರೆ. ಉಳಿದವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಗಳು ತಿಳಿಸಿವೆ. 

SCROLL FOR NEXT